ADVERTISEMENT

ಮೂರು ದಿನಗಳಲ್ಲಿ 200 ಮನೆಗಳಿಗೆ ಹಾನಿ

ಪರಿಹಾರಕ್ಕೆ ತ್ವರಿತ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ, ವಾಡಿಕೆಗಿಂತ ಅಧಿಕ ಮಳೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:52 IST
Last Updated 30 ಸೆಪ್ಟೆಂಬರ್ 2022, 16:52 IST
ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರು
ಕೊಪ್ಪಳ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರು   

ಕೊಪ್ಪಳ: ಕಳೆದ ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಒಟ್ಟು 200 ಮನೆಗಳಿಗೆ ಹಾನಿಯಾಗಿದೆ.

ಈ ಹಿನ್ನೆಲೆಯಲ್ಲಿ ಶುಕ್ರವಾರ ಮಳೆ ಹಾನಿ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ‘ಮಳೆಯಿಂದ ಹಾನಿಯಾದ ವಿವರವನ್ನು ಶೀಘ್ರವಾಗಿ ತಂತ್ರಾಂಶದಲ್ಲಿ ನಮೂದಿಸಿ, ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲೆಯಲ್ಲಿ ಮೂರು ದಿನಗಳಿಂದ ಸುರಿದ ಮಳೆಯಿಂದ ಮನೆ ಹಾನಿ ಮತ್ತು ಬೆಳೆ ಹಾನಿಯಾದರೆ ಕೂಡಲೇ ಜಂಟಿ ಸಮೀಕ್ಷೆ ಮಾಡಿ, ಮನೆ ಹಾನಿ ಆಗಿದ್ದಕ್ಕೆ ಆರ್‌ಜಿಆರ್‌ಎಚ್‌ಸಿಎಲ್‌ ತಂತ್ರಾಂಶದಲ್ಲಿ ನಮೂದಿಸಬೇಕು. ಬೆಳೆ ಹಾನಿಗೆ ಸಂಬಂಧಿಸಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯವರು ಜಂಟಿಯಾಗಿ ಸಮೀಕ್ಷೆ ಮಾಡಿ ತ್ವರಿತವಾಗಿ ವರದಿ ಸಲ್ಲಿಸಬೇಕು’ ಎಂದು ಹೇಳಿದರು.

ADVERTISEMENT

‘ಮಳೆಯಿಂದ ಮಾನವ ಪ್ರಾಣಹಾನಿ ಮತ್ತು ಜಾನುವಾರು ಪ್ರಾಣ ಹಾನಿಯಾದರೆ ಕೂಡಲೇ ಕಂದಾಯ ಅಧಿಕಾರಿಗಳು 48 ಗಂಟೆಯೊಳಗಾಗಿ ಪರಿಹಾರ ನೀಡಬೇಕು. ಕೆಳಮಟ್ಟದಲ್ಲಿರುವ ಸೇತುವೆ ಮತ್ತು ರಸ್ತೆಗಳ ಮೇಲೆ ನೀರು ಬಂದರೆ ಅಲ್ಲಿ ಸ್ಥಳೀಯ ಸಿಬ್ಬಂದಿ ಸಹಾಯದಿಂದ ಬ್ಯಾರಿಕೆಡಿಂಗ್ ಮಾಡಿಸಿ, ಸಾರ್ವಜನಿಕರು ಹೋಗದಂತೆ ಮುನ್ನಚ್ಚರಿಕೆವಾಗಿ ಸೂಕ್ತ ಕ್ರಮ ವಹಿಸಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಮಾತನಾಡಿ ‘ಜಿಲ್ಲೆಯಲ್ಲಿ ಈ ವರ್ಷದ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ವಾಡಿಕೆ 38.3 ಸೆಂ.ಮೀ. ಮಳೆಯಿದ್ದು, 44.8ಸೆಂ.ಮೀ. ಆಗಿದೆ. ಮಳೆಯಿಂದ ಭಾಗಶಃ 841 ಮನೆಗಳು ಹಾನಿಯಾಗಿದ್ದು, ಈ ಪೈಕಿ 833 ಮನೆಗಳಿಗೆ ₹4.50 ಕೋಟಿ ಪರಿಹಾರ ನೀಡಲಾಗಿದೆ. ಬಾಕಿ ಉಳಿದ ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು ₹200 ಮನೆಗಳು ಹಾನಿಯಾಗಿದ್ದು, ಸದರಿ ಹಾನಿಯಾದ ಮನೆಗಳಿಗೆ ಶೀಘ್ರವಾಗಿ ಪರಿಹಾರ ವಿತರಿಸಲಾಗುವುದು’ ಎಂದರು.

ಜೂನ್‌ನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಒಟ್ಟು 700 ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ 1,400 ರೈತರಿಗೆ ₹1.26 ಕೋಟಿ ಪರಿಹಾರ ನೀಡಲಾಗಿದೆ. ಕಳೆದ ಮೂರು ದಿನಗಳ ಹಾನಿಯ ವಿವರವನ್ನು ಅಧಿಕಾರಿಗಳು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.