ADVERTISEMENT

ಜಿಲ್ಲೆಯಲ್ಲಿ 311 ಪೋಕ್ಸೊ ಪ್ರಕರಣ

ಸಮಾಲೋಚನಾ ಸಭೆ: ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ್‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 10:12 IST
Last Updated 1 ಜನವರಿ 2020, 10:12 IST
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿದರು
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಮಾತನಾಡಿದರು   

ಕೊಪ್ಪಳ: ತೆರೆದಮನೆ ಕಾರ್ಯಕ್ರಮದ ಮೂಲಕ ಪ್ರತಿ ಮಗುವಿಗೂ ಉತ್ತಮ ವ್ಯಕ್ತಿತ್ವ ಹಾಗೂ ಭವಿಷ್ಯ ರೂಪಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸಲು ಕ್ರಿಯಾ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.

ಜಿಲ್ಲಾಡಳಿತವು, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಹಯೋಗದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ಸಂರಕ್ಷಣಾ ಕಾಯ್ದೆ-2012ರ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಚಿಸಿರುವ ಕಾರ್ಯವಿಧಾನ ಪ್ರಕ್ರಿಯೆ ಮತ್ತು ಮಾರ್ಗಸೂಚಿಗಳ ಅನುಷ್ಠಾನ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2012 ರಿಂದ 2019ರವರೆಗೆ ಜಿಲ್ಲೆಯಲ್ಲಿ ಪೋಕ್ಸೊ ಕಾಯ್ದೆ ಅಡಿ 311 ಪ್ರಕರಣಗಳು ದಾಖಲಾಗಿವೆ. 146 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. 84 ಖುಲಾಸೆಯಾದ ಪ್ರಕರಣಗಳಿದ್ದು, ಒಟ್ಟು 12 ಪ್ರಕರಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದೆ ಎಂದು ತಿಳಿಸಿದರು.

ADVERTISEMENT

ಸಂತ್ರ‍ಸ್ತರ ಪ್ರಕರಣಗಳಲ್ಲಿ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಬೇಕೆಂದಿಲ್ಲ, ತಾಲ್ಲೂಕು ಮಟ್ಟದಲ್ಲಿರುವ ಆಸ್ಪತ್ರೆಗಳಲ್ಲಿಯೂ ಅವರಿಗೆ ಚಿಕಿತ್ಸೆ ನೀಡಬಹುದು. ಸಂತ್ರಸ್ತರಿಗೆ ಸರಿಯಾದ ರೀತಿಯಲ್ಲಿ ಸ್ಪಂದನೆ ಸಿಗದಿದ್ದಲ್ಲಿ ವೈದ್ಯರು ಅಥವಾ ಪೊಲೀಸ್ ಯಾರೇ ಇರಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಸಂತ್ರಸ್ತೆಗೆ ಯಾವುದೇ ಸಮಸ್ಯೆ ಬರದಂತೆ ವೈದ್ಯರು ನೋಡಿಕೊಳ್ಳಬೇಕು. ಅತಿ ಹೆಚ್ಚು ಪ್ರಕರಣಗಳು ಪ್ರೀತಿ-ಪ್ರೇಮಕ್ಕೆ ಸಂಬಂ
ಧಿಸಿದವುಗಳಾಗಿರುತ್ತವೆ ಎಂದರು.

ಪ್ರಕರಣ ದಾಖಲಾದ 72 ಗಂಟೆಗಳ ಒಳಗೆ ಕಾನೂನು ಪ್ರಕಾರ ಅಗತ್ಯ ಎಲ್ಲ ವೈದ್ಯಕೀಯ ಪರೀಕ್ಷೆ ಮಾಡಬೇಕು. ವೈದ್ಯರು ಪುರುಷ-ಮಹಿಳೆ ಎಂದು ಭೇದ ತೋರಿ ಚಿಕಿತ್ಸೆ ಕೊಡುವುದಕ್ಕೆ ಹಿಂಜರಿಯಬಾರದು. ಆದ್ದರಿಂದ ಪ್ರಕರಣದ ಕುರಿತು ನಿರ್ಲಕ್ಷ್ಯ ತೋರದೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ. ಪ್ರಕರಣ ಘಟಿಸಿದ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಸುತ್ತಮುತ್ತಲಿನ, ಹತ್ತಿರದ ಆಸ್ಪತ್ರೆಗೆ ಸಂತ್ರಸ್ತೆಯನ್ನು ದಾಖಲು ಮಾಡಬೇಕು. ಪೋಕ್ಸೊ ಅಡಿ ಪೊಲೀಸ್ ಠಾಣೆಗೆ ಯಾವುದೇ ಸಂತ್ರಸ್ತೆ ಪ್ರಕರಣ ದಾಖಲಿಸಿದ ತಕ್ಷಣ ವೈದ್ಯಕೀಯ ಚಿಕಿತ್ಸೆ ಮತ್ತು ಇದರ ಜತೆಗೆ ಕಲಂ 161, 164 ರಂತೆ ಅವರ ಹೇಳಿಕೆಯನ್ನು ತೆಗೆದುಕೊಳ್ಳಬೇಕು. ಸಂತ್ರಸ್ತೆ ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬುದನ್ನು ರೆಕಾರ್ಡ್ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರೀ ಆರ್.,ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಜಿಲ್ಲಾ ಸಂಯೋಜಕ ಹರೀಶ ಜೋಗಿ, ಸಿಡಬ್ಲ್ಯೂಸಿ ಸದಸ್ಯೆ ಸರೋಜಿನಿ ಬಾಪ್ಲೆ, ಮಹಿಳಾ ಕಲ್ಯಾಣ ಸಮಿತಿ ಅಧ್ಯಕ್ಷೆ ನಿಲೂಫರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.