ADVERTISEMENT

ಕಾಂಗ್ರೆಸ್‌ನಲ್ಲಿ ಶೇ. 80ರಷ್ಟು ಕಮಿಷನ್‌ ವ್ಯವಹಾರ: ಬಿಜೆಪಿ ಮುಖಂಡ ಕಟೀಲ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 14:53 IST
Last Updated 29 ಜೂನ್ 2025, 14:53 IST
ನಳಿನ್ ಕುಮಾರ್ ಕಟೀಲ್‌
ನಳಿನ್ ಕುಮಾರ್ ಕಟೀಲ್‌   

ಕೊಪ್ಪಳ: ’ಹಿಂದಿನ ಬಿಜೆಪಿ ಸರ್ಕಾರದಲ್ಲಿ ಶೇ. 40ರಷ್ಟು ಕಮಿಷನ್‌ ಇದೆ ಎಂದು ಕಾಂಗ್ರೆಸ್‌ ವಿನಾಕಾರಣ ಆರೋಪ ಮಾಡಿತ್ತು. ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಶೇ. 80ರಷ್ಟು ಕಮಿಷನ್‌ ವ್ಯವಹಾರ ನಡೆಯುತ್ತಿದೆ’ ಎಂದು ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್‌ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ನಡುವೆ ಕಚ್ಚಾಟ ನಡೆಯುತ್ತಿದೆ. ಸಿದ್ದರಾಮಯ್ಯ ಅಧಿಕಾರ ನಡೆಸಲು ಶಿವಕುಮಾರ್ ಬಿಡುತ್ತಿಲ್ಲ, ಡಿಕೆಶಿ ಮುಖ್ಯಮಂತ್ರಿಯಾಗಲು ಸಿದ್ದರಾಮಯ್ಯ ಅವಕಾಶ ಕೊಡುವುದಿಲ್ಲ. ಇವರ ಗುದ್ದಾಟದಲ್ಲಿ ರಾಜ್ಯ ಸರ್ಕಾರ ಅಭಿವೃದ್ಧಿ ಹೀನವಾಗಿದೆ. ಶಾಸಕರ ನಿಧಿಯಿಲ್ಲ. ಯೋಚನೆ ಹಾಗೂ ಯೋಚನೆಗಳಂತೂ ಇಲ್ಲವೇ ಇಲ್ಲ. ಈಗಿನ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಅವರ ಪಕ್ಷದವರೇ ಹೇಳುತ್ತಿದ್ದಾರಲ್ಲ. ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಬೇರೆ ಪಕ್ಷಗಳಲ್ಲಿ ಅಧಿಕಾರ ಬಳಸಿಕೊಂಡು ಕಾಂಗ್ರೆಸ್‌ನಲ್ಲಿ ಬಂದು ಮುಖ್ಯಮಂತ್ರಿಯಾಗಿದ್ದಾರೆ. ಅವರು ಸಮಾಜವಾದಿ ನಾಯಕರಲ್ಲ; ಮಜವಾದಿಯಾಗಿದ್ದಾರೆ. ತಮ್ಮ ಸರ್ಕಾರದಲ್ಲಿ ಸಚಿವರಿಂದಲೇ ಹಗರಣವಾದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಕಣ್ಣು ಮುಚ್ಚಿಕೊಂಡು ಭ್ರಷ್ಟಾಚಾರ ಸಹಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.