
ಗಂಗಾವತಿ: ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ಶಾಸನ ಸಹಿತದ ವಿಶಿಷ್ಟ ವೀರಗಲ್ಲನ್ನು ಹಿರೇಬೆಣಕಲ್ ಅನ್ವೇಷಣಾ ತಂಡದ ಸದಸ್ಯರು ಪತ್ತೆ ಹಚ್ಚಿದ ಘಟನೆ ಈಚೆಗೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ, ‘ವೀರಗಲ್ಲು ಸಾಂಸ್ಕೃತಿಕವಾಗಿ ತುಂಬ ಮಹತ್ವ ಹೊಂದಿದೆ. ವೀರಗಲ್ಲು ಬಿಳಿ ಗ್ರಾನೈಟ್ ಶಿಲೆಯಲ್ಲಿ ರಚಿತವಾಗಿದ್ದು, ಇದು 3 ಹಂತಗಳನ್ನೊಳಗೊಂಡಿದೆ. ಮೊದಲ ಹಂತದಲ್ಲಿ (ಭೂಲೋಕ) ವೀರನೊಬ್ಬ ಬಲಗೈಯಲ್ಲಿ ಚೂರಿ ಹಿಡಿದು ಹೋರಾಟದ ಭಂಗಿಮದಲ್ಲಿದ್ದಾನೆ. ತಲೆ ಮೇಲೆ ವಿಶಿಷ್ಟ ರೀತಿಯ ಪೇಟಾ ಇದೆ.
ಇನ್ನೂ 2ನೇ ಹಂತದಲ್ಲಿ (ಅಂತರಿಕ್ಷ ಲೋಕ) ಹೋರಾಟದಲ್ಲಿ ಹುತಾತ್ಮನಾದ ವೀರನನ್ನು ಅಪ್ಸರೆಯರು ಸ್ವರ್ಗಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯವಿದೆ. 3ನೇ ಹಂತದಲ್ಲಿ (ಸ್ವರ್ಗ ಲೋಕ) ವೀರನಿಗೆ ಸ್ವರ್ಗಪ್ರಾಪ್ತಿಯಾದ ಸಂಕೇತವಾಗಿ ಆತ ಇಬ್ಬರು ಚಾಮರಧಾರಿಯ ಸೇವೆ ಪಡೆಯುತ್ತ ಸ್ವರ್ಗ ಸುಖ ಅನುಭವಿಸುತ್ತಿರುವ ದೃಶ್ಯವಿದೆ’ ಎಂದು ತಿಳಿಸಿದರು.
ಕೆಳ ಹಂತದಲ್ಲಿ ವೀರನ ಪಕ್ಕದಲ್ಲಿ ಶಾಸನ ಬರಹವಿದ್ದು, ವೀರನ ಶೌರ್ಯ, ಸಾಹಸ ತಿಳಿಸುತ್ತದೆ. ಶ್ರೀಹರಿಯು ಹಿರಣ್ಯಾಕ್ಷನನ್ನು ಸಂಹರಿಸಿ ಭೂದೇವಿ ರಕ್ಷಿಸಿದಂತೆ ಚಂದ ಎಂಬ ಭಟನು ಭೂಮಿ (ಗ್ರಾಮವನ್ನು) ರಕ್ಷಿಸಿದನೆಂಬ ಅರ್ಥ ಬರುವಂತಿದೆ ಎಂದು ತಿಳಿಸಿದರು.
‘7 ಪ್ರಕಾರದ ವೀರಗಲ್ಲುಗಳಲ್ಲಿ ಗ್ರಾಮದ ಮೇಲೆ ದಾಳಿಯಾದಾಗ ವೀರನೊಬ್ಬ ಶತ್ರುಗಳ ವಿರುದ್ಧ ಹೋರಾಡಿ ಗ್ರಾಮ ರಕ್ಷಿಸಿ ತಾನು ಮಡಿಯಲು ಆತನ ಸ್ಮರಣಾರ್ಥ ಹಾಕಿಸಿದ ವೀರಗಲ್ಲು ಇದಾಗಿದೆ’ ಎಂದರು.
ಶಿಲ್ಪ ಮತ್ತು ಅಕ್ಷರಗಳ ಶೈಲಿಯಿದ್ದು, 9ನೇ ಶತಮಾನದ್ದಾಗಿದ್ದು, ಗಂಗಾವತಿ ಪ್ರದೇಶದಲ್ಲಿ ಅತಿ ಪ್ರಾಚೀನದ ಶಾಸನೋಕ್ತ ವೀರಗಲ್ಲು ಇದಾಗಿದೆ ಎಂದರು.
ಇನ್ನೂ ಬೆಂಗಳೂರಿನ ಲಿಪಿತಜ್ಞ ಜಿ.ಕೆ ದೇವರಾಜಸ್ವಾಮಿ ಅವರು ಶಾಸನ ಬರಹದ ಇನ್ನಷ್ಟು ಸ್ಪಷ್ಟ ಓದಿನಿಂದ ಅದು ಕರ್ನಾಟಕದ ವೀರ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆಯಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿರೇಬೆಣಕಲ್ ಅನ್ವೇಷಣಾ ತಂಡದ ಮಂಜುನಾಥ ದೊಡ್ಡಮನಿ, ವೀರೇಶ ಅಂಗಡಿ, ಚಂದ್ರಶೇಖರ ಕುಂಬಾರ, ಹರನಾಯಕ, ಹುಸೇನಬಾಷ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.