ADVERTISEMENT

ಸುಳಿವು ನೀಡಿದ ಸಿಸಿಟಿವಿ ಕ್ಯಾಮೆರಾ

ದೃಶ್ಯಾವಳಿಗಳ ಬೆನ್ನು ಹತ್ತಿದ ಪೊಲೀಸರಿಗೆ ನಾಲ್ಕು ಕಳ್ಳತನಗಳ ಆರೋಪಿಗಳು ಅಂದರ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 14:21 IST
Last Updated 21 ಅಕ್ಟೋಬರ್ 2024, 14:21 IST
ಯಲಬುರ್ಗಾದಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್‌ ತಂಡ
ಯಲಬುರ್ಗಾದಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್‌ ತಂಡ   

ಕೊಪ್ಪಳ: ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ಫೋನ್‌ ಕರೆಗಳ ದಾಖಲೆಗಳನ್ನು ಬೆನ್ನು ಹತ್ತಿದ ಪೊಲೀಸರು ಜಿಲ್ಲೆಯ ಯಲಬುರ್ಗಾ ಪಟ್ಟಣದ ರಾಮನಗರ ಬಡಾವಣೆಯಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿಯ ಬೀರಪ್ಪ ದೇವಿಕೇರಿ ಹಾಗೂ ನಾಗರಾಜ ಹಣಜಗಿ ಬಂಧಿತರು. ಒಟ್ಟು ಮೂರು ಜನರ ತಂಡದಲ್ಲಿ ಇವರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಇನ್ನೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ. ಇವರ ಬಂಧನದಿಂದಾಗಿ ಯಲಬುರ್ಗಾದ ವಿವಿಧೆಡೆ ನಡೆದ ಇನ್ನುಳಿದ ಮೂರು ಪ್ರಕರಣಗಳಲ್ಲಿಯೂ ಇವರು ಭಾಗಿಯಾಗಿರುವುದು ಗೊತ್ತಾಗಿದೆ. ಬಂಧಿತ ಆರೋಪಿಗಳ ಮೇಲೆ ಒಟ್ಟು ಎಂಟು ಪ್ರಕರಣಗಳಿವೆ.

ಯಲಬುರ್ಗಾದಲ್ಲಿ ಅ.8ರಿಂದ 9ರ ಅವಧಿಯಲ್ಲಿ ಮಲ್ಲಯ್ಯ ಸೊಪ್ಪಿಮಠ ಎಂಬುವರ ಮನೆಯಲ್ಲಿ 160 ಗ್ರಾಂ ತೂಕದ ಚಿನ್ನದ ಬಿಸ್ಕೆಟ್‌ ಗಟ್ಟಿ, ಆಭರಣ ಮತ್ತು ₹19.50 ಲಕ್ಷ ನಗದು ಸೇರಿ ಒಟ್ಟು ₹28.14 ಲಕ್ಷ ಮೌಲ್ಯದಷ್ಟು ಕಳ್ಳತನವಾಗಿತ್ತು. ಎಫ್‌ಐಆರ್‌ ದಾಖಲಾದ ಹತ್ತು ದಿನಗಳಲ್ಲಿಯೇ ಆರೋಪಿಗಳನ್ನು ಬಂಧಿಸಿರುವುದು ವಿಶೇಷ.

ADVERTISEMENT

ಸುಳಿವು ನೀಡಿದ ಕ್ಯಾಮೆರಾ: ಕಳ್ಳತನ ನಡೆದ ಮನೆಯ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿ ಕೆಂಭಾವಿಗೂ ಹೋಗಿ ಬಂದ ಪೊಲೀಸ್‌ ತಂಡ ಪರಸ್ಪರ ಒಂದಕ್ಕೊಂದು ಹೋಲಿಕೆ ಮಾಡಿದೆ. ಸುತ್ತಮುತ್ತಲೂ ಜನರ ಓಡಾಟ ಮತ್ತು ಆ ಸಮಯದಲ್ಲಿ ಸಮೀಪದಲ್ಲಿದ್ದ ಟವರ್‌ಗೆ ಬಂದ ಫೋನ್‌ ಕರೆಗಳ ಮಾಹಿತಿ ಹೀಗೆ ತಾಂತ್ರಿಕವಾಗಿಯೂ ತಂಡ ಕೆಲಸ ಮಾಡಿದ್ದರಿಂದ ಕೆಲವರ ಮೇಲೆ ಅನುಮಾನ ಬಂದಿದೆ. ಅವರನ್ನು ವಿಚಾರಿಸಿದಾಗ ಆರೋಪಿಗಳು ಸಿಕ್ಕಿ ಬಿದ್ದರು ಎಂದು ಪೊಲೀಸರೊಬ್ಬರು ತಿಳಿಸಿದರು.

ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ‘ಈಗಿನ ಹಾಗೂ ಹಿಂದಿನ ಪ್ರಕರಣಗಳಿಗೆ ಸಂಬಂಧಿಸಿದ ಒಟ್ಟು 182.2 ಗ್ರಾಂ ಚಿನ್ನಾಭರಣ, 90 ಗ್ರಾಂ ಬೆಳ್ಳಿ ಆಭರಣ, ₹16.90 ಲಕ್ಷ ನಗದು ಸೇರಿ ಒಟ್ಟು ₹30.62 ಲಕ್ಷ ಬೆಲೆಬಾಳುವ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ’ ಎಂದರು.

‘ಶ್ರಮ ಪಟ್ಟು ನಮ್ಮ ಪೊಲೀಸರು ಕಡಿಮೆ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದು ಶ್ಲಾಘನೀಯ. ಅವರಿಗೆ ಸೂಕ್ತ ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಎಸ್‌.ಪಿ., ಹೇಮಂತಕುಮಾರ್‌ ಆರ್‌., ಡಿವೈಎಸ್‌ಪಿ ಮುತ್ತಣ್ಣ ಸರವಗೋಳ, ಯಲಬುರ್ಗಾ ವೃತ್ತದ ಸಿಪಿಐ ಮಾನೇಶ್ವರ ಮಾಲಿಪಾಟೀಲ್, ಪೊಲೀಸ್‌ ಇನ್‌ಸ್ಪೆಕ್ಟರ್‌ ಚಂದ್ರಪ್ಪ, ಪೊಲೀಸ್‌ ಸಬ್‌ ಇನ್‌ಸ್ಟೆಕ್ಟರ್‌ ವಿಜಯ ಪ್ರತಾಪ, ಕುಕನೂರು ಪಿಎಸ್‌ಐ ಗುರುರಾಜ, ಬೇವೂರು ಪಿಎಸ್‌ಐ ಪ್ರಶಾಂತ, ಪಿಎಸ್‌ಐ (ತನಿಖೆ) ಗುಲಾಮ್‌ ಅಹ್ಮದ್‌ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬೀರಪ್ಪ ದೇವಿಕೇರಿ
ನಾಗರಾಜ ಹಣಜಗಿ

ಪೊಲೀಸ್‌ ಮನೆಗೆ ಕನ್ನ ಹಾಕಿದ್ದ ಆರೋಪಿಗಳು!

ಮಲ್ಲಯ್ಯ ಸೊಪ್ಪಿಮಠ ಅವರ ಮನೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹೆಚ್ಚುವಾಗ ಹಿಂದೆ ನಡೆಸಿದ ಕೃತ್ಯಗಳ ಬಗ್ಗೆಯೂ ಮಾಹಿತಿ ಬಹಿರಂಗವಾಗಿದೆ. ಯಲಬುರ್ಗಾದ ರಾಘವೇಂದ್ರ ಕಾಲೊನಿಯಲ್ಲಿದ್ದ ಪೊಲೀಸ್ ಅಧಿಕಾರಿ ರಿಯಾಜ ಗಡಾದ ಅವರ ಮನೆಯಲ್ಲಿ ಇದೇ ವರ್ಷದ ಜನವರಿಯಲ್ಲಿ ನಡೆದಿದ್ದ ಘಟನೆಯಲ್ಲಿ ₹4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಆರೋಪವಿದೆ.

ಒಂದೇ ದಿನ ಎರಡು ಕಡೆ ಕಳ್ಳತನ

ಆರೋಪಿಗಳು ಒಂದೇ ದಿನ ಎರಡು ಕಡೆ ಕಳ್ಳತನ ಮಾಡಿದ್ದಾರೆ. ಮಲ್ಲಯ್ಯ ಸೊಪ್ಪಿಮಠ ಅವರ ಮನೆಯಲ್ಲಿ ಕಳ್ಳತನವಾದ ದಿನವೇ ಅದೇ ಬಡಾವಣೆಯಲ್ಲಿ ವಾಸವಾಗಿರುವ ಉದ್ಯಮಿ ಗಿರೀಶ ಬಡಿಗೇರ ಮನೆಯಲ್ಲಿಯೂ ಕಳ್ಳತನ ನಡೆದಿದೆ. ಮುಧೋಳ ಸೀಮೆಯಲ್ಲಿರುವ ಬಾರ್‌ ಅಂಗಡಿಯೊಂದರಲ್ಲಿಯೂ ಇವರು ಕಳ್ಳತನದ ಆರೋಪಿಗಳಾಗಿದ್ದಾರೆ. ತಮ್ಮ ಮನೆಯಲ್ಲಿ ಕಳ್ಳತನವಾದ ಕುರಿತು ಗಿರೀಶ ಪೊಲೀಸರಿಗೆ ದೂರು ನೀಡಿದ್ದರು. ಎಫ್‌ಐಆರ್‌ ದಾಖಲಾದ ಅ. 19ರಂದೇ ಈಗ ಬಂಧಿತರಾಗಿರುವ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.