ಕೊಪ್ಪಳ: ಕಲ್ಯಾಣ ಕರ್ನಾಟಕ ಸಂಪೂರ್ಣ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಹಲವು ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಹೊಸ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಇದರ ಭಾಗವಾಗಿ ಕೊಪ್ಪಳ ನಗರಕ್ಕೆ ಹೊಸ ಆರೋಗ್ಯ ಕೇಂದ್ರ ಮಂಜೂರಾಗಿದೆ.
ನಗರ ವ್ಯಾಪ್ತಿಯಲ್ಲಿ ಈಗಾಗಲೇ ತಾಲ್ಲೂಕು ಆಸ್ಪತ್ರೆಯೂ ಇದ್ದು, ಹೊಸ ನಗರ ಆರೋಗ್ಯ ಕೇಂದ್ರವನ್ನು ಭಾಗ್ಯನಗರ ಭಾಗದಲ್ಲಿ ಆರಂಭಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಿಂದುಳಿದಿದ್ದು, ಭಾರತೀಯ ಸಾರ್ವಜನಿಕ ಆರೋಗ್ಯ ಮಾನದಂಡಗಳು (ಐಪಿಎಚ್‌ಎಸ್) ಪ್ರಕಾರ ಆರೋಗ್ಯ ಸೇವೆಗಳು ಈ ಭಾಗದಲ್ಲಿ ಲಭ್ಯವಿಲ್ಲ ಎನ್ನುವುದನ್ನು ಅರಿತು ಈ ಯೋಜನೆಯಡಿ ಮತ್ತಷ್ಟು ಆರೋಗ್ಯ ಸೇವೆ ನೀಡಲು ಯೋಜನೆ ರೂಪಿಸಲಾಗಿದೆ.
ಬೆಳಗಾವಿ, ಬೆಂಗಳೂರು, ಮೈಸೂರು ವಿಭಾಗಕ್ಕೆ ಹೋಲಿಸಿದರೆ ಕಲಬುರಗಿ ವಿಭಾಗದಲ್ಲಿ ತಾಯಿ ಹಾಗೂ ಮಗುವಿನ ಸಾವಿನ ಪ್ರಮಾಣ ವ್ಯಾಪಕವಾಗಿದೆ. ಇದನ್ನು ತಗ್ಗಿಸಲು, ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಪ್ರಾಥಮಿಕ ಹಾಗೂ ದ್ವಿತೀಯ ಆರೋಗ್ಯ ಸೇವೆಗಳನ್ನು ಒದಗಿಸುವ ಸಲುವಾಗಿ ಅಸ್ತಿತ್ವದಲ್ಲಿರುವ ಆರೋಗ್ಯ ಸೇವೆಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ.
ಆರೋಗ್ಯ ಕೇಂದ್ರಗಳ ಕೊರತೆ ಬಗ್ಗೆ ತಜ್ಞರ ತಂಡ ಹಾಗೂ ಇಲಾಖೆ ಅಧಿಕಾರಿಗಳು ಅಧ್ಯಯನ ನಡೆಸಿ ಅದಕ್ಕೆ ಅನುಗುಣವಾಗಿ ಜಿಲ್ಲೆಗೆ ಹೊಸ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.ಡಾ. ಲಿಂಗರಾಜು ಟಿ., ಕೊಪ್ಪಳ ಡಿಎಚ್‌ಒ
ಐಪಿಎಚ್‌ಎಸ್ ಮಾನದಂಡಗಳ ಪ್ರಕಾರ ಪ್ರಸ್ತುತ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಟ್ಟು 24 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 10 ಸಮುದಾಯ ಆರೋಗ್ಯ ಕೇಂದ್ರಗಳು, 2007ರ ಯೋಜಿತ ನಗರ ಜನಸಂಖ್ಯೆಗೆ ಅನುಗುಣವಾಗಿ ಏಳು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಾಲ್ಕು ನಗರ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಜಿಲ್ಲೆಯ ಲಿಂಗದಹಳ್ಳಿ, ಹಿರೇಬನ್ನಿಗೋಳ, ಜೀರಾಳ, ಗೌರಿಪುರದಲ್ಲಿ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. ಕುಷ್ಟಗಿ ತಾಲ್ಲೂಕಿನ ಹನುಮಸಾಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 30 ಹಾಸಿಗೆಗಳ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿಸುವುದು, ಸಮುದಾಯ ಆರೋಗ್ಯ ಕೇಂದ್ರಗಳನ್ನು ಹೊಂದಿರುವ ಹಿರೇಸಿಂಧೋಗಿ, ಮುನಿರಾಬಾದ್ ಹಾಗೂ ತಾವರಗೇರಾದ ಆಸ್ಪತ್ರೆಗಳನ್ನು 30ರಿಂದ 50 ಹಾಸಿಗೆಗಳ ಸಾಮರ್ಥ್ಯಕ್ಕೆ ಏರಿಸಲು ತೀರ್ಮಾನಿಸಲಾಗಿದೆ.
ಐದಾರು ವರ್ಷಗಳ ಹಿಂದೆ ಹೊಸ ತಾಲ್ಲೂಕುಗಳಾಗಿ ರಚನೆಯಾದ ಕುಕನೂರು, ಕಾರಟಗಿ ಮತ್ತು ಕನಕಗಿರಿಯ 30 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೇಗೇರಿಸಲಾಗುತ್ತದೆ. ಸದಾ ಜನಜಂಗುಳಿ ಹೆಚ್ಚಿರುವ ಮತ್ತು ಸುತ್ತಮುತ್ತಲಿನ ಊರುಗಳ ಜನರಿಗೆ ಸಾಕಷ್ಟು ಅನುಕೂಲ ಒದಗಿಸುವ ಗಂಗಾವತಿಯ ಸರ್ಕಾರಿ ಆಸ್ಪತ್ರೆಯನ್ನು 100 ಹಾಸಿಗೆಯಿಂದ 150 ಹಾಸಿಗೆಗಳಿಗೆ ಮೇಲ್ದರ್ಜೆಗೆ ಏರಿಕೆ ಮಾಡಲು ನಿರ್ಧರಿಸಲಾಗಿದೆ.
ಭಾರ ತಗ್ಗಿಸಲು ಕಸರತ್ತು: ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಜನಸಂದಣಿ ಇರುತ್ತದೆ. ಕೆಲವು ಕಡೆ ನೋಂದಣಿ ಕೌಂಟರ್‌ಗಳು ಕಡಿಮೆ ಸಂಖ್ಯೆಯಲ್ಲಿವೆ. ಆದ್ದರಿಂದ ಆಯಾ ಗ್ರಾಮಗಳ ಜನರಿಗೆ ತಮ್ಮ ಸಮೀಪದಲ್ಲಿಯೇ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸಲು ಹೊಸ ಕೇಂದ್ರಗಳು ನೆರವಾಗುತ್ತವೆ ಎನ್ನುವ ನಿರೀಕ್ಷೆ ಆರೋಗ್ಯ ಇಲಾಖೆಯದ್ದಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆಸಿದ್ದ ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸೇವೆಗಳ ಕೊರತೆ ಬಗ್ಗೆ ಚರ್ಚೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.