ADVERTISEMENT

ಕ‌ನಕಗಿರಿ: ಸರ್ಕಾರಿ ಶಾಲೆಗಳಲ್ಲಿ ಕಾಣದ ಕಲರವ

ಕಾಯಂ ಶಿಕ್ಷಕರ ಕೊರತೆ; ಪೋಷಕರಲ್ಲಿ ಮಕ್ಕಳ ಭವಿಷ್ಯದ ಆತಂಕ

ಮೆಹಬೂಬ ಹುಸೇನ
Published 12 ಜೂನ್ 2025, 5:13 IST
Last Updated 12 ಜೂನ್ 2025, 5:13 IST
<div class="paragraphs"><p>ಪರೀಕ್ಷೆ–ಪ್ರಾತಿನಿಧಿಕ ಚಿತ್ರ</p></div>

ಪರೀಕ್ಷೆ–ಪ್ರಾತಿನಿಧಿಕ ಚಿತ್ರ

   

ಕ‌ನಕಗಿರಿ: ಸರ್ಕಾರಿ ಶಾಲೆಗಳ ಬಲವರ್ಧನೆಗಾಗಿ ಸರ್ಕಾರ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದ್ದರೂ ವರ್ಷದಿಂದ ವರ್ಷಕ್ಕೆ ಪ್ರವೇಶಾತಿ ಪ್ರಮಾಣದಲ್ಲಿ ಕಡಿಮೆಯಾಗುತ್ತಲೇ ಸಾಗಿದೆ.

ತಾಲ್ಲೂಕಿನಲ್ಲಿ ಸರ್ಕಾರಿ ಕಿರಿಯ,‌ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರ ಕೊರತೆಯೂ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇಲ್ಲಿನ ಕೆಪಿಎಸ್ ಪ್ರೌಢಶಾಲೆಯಲ್ಲಿ ಹಿಂದಿನ‌ ವರ್ಷ ಎಂಟನೆ ತರಗತಿಗೆ 111 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಸದ್ಯ 44 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಮುಂದಿನ ದಿನಗಳಲ್ಲಿ 20ರಿಂದ 25 ವಿದ್ಯಾರ್ಥಿಗಳು ಬಂದರೆ ಅದೇ ಹೆಚ್ಚು ಎನ್ನುವಂತಾಗಿದೆ ಎಂದು ಅಲ್ಲಿನ ಶಿಕ್ಷಕರೊಬ್ಬರು ಮಾಹಿತಿ ನೀಡಿದರು.

ADVERTISEMENT

ಇಲ್ಲಿನ ಗೊಲ್ಲರವಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬುಧವಾರದ ವೇಳೆಗೆ (ಜೂನ್‌ 11) ಒಂದನೇ ತರಗತಿಗೆ 16 ಮಕ್ಕಳ ದಾಖಲಾತಿ ಆಗಿತ್ತು. ಕಳೆದ ವರ್ಷ ಈ ಶಾಲೆಯಲ್ಲಿ 29 ಮಕ್ಕಳಿದ್ದರು. ಮಡ್ಡೇರವಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸಲ 8 (ಕಳೆದ ವರ್ಷ 15), ಗೊಲಗೇರಪ್ಪ ಕಾಲೊನಿ ಶಾಲೆಯಲ್ಲಿ 6 (ಹಿಂದಿನ ವರ್ಷ 16), ದ್ಯಾಮವ್ವನಗುಡಿ 3 (ಹಿಂದಿನ ವರ್ಷ 19), ಇಂದಿರಾನಗರದ ಶಾಲೆಯಲ್ಲಿ 8 (ಹಿಂದಿನ ವರ್ಷ 15) ಹೀಗೆ ಪ್ರತಿ ಶಾಲೆಯಲ್ಲಿಯೂ ಮಕ್ಕಳ ದಾಖಲಾತಿ ಸಂಖ್ಯೆ ಕುಸಿತದ ಹಾದಿ ಹಿಡಿದಿದೆ. ಒಂದೆಡೆ ಶಾಲಾ ದಾಖಲಾತಿ ಆಂದೋಲನ ಸಾಗಿದೆ, ಇನ್ನೊಂದೆಡೆ ತರಗತಿಗಳು ಆರಂಭವಾಗಿವೆ.   

ಕಾರಣಗಳು ಅನೇಕ:

ಪಟ್ಟಣದ ಶಾಸಕರ‌‌ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಕಲಿಕೆ ಆರಂಭಿಸಿದ್ದು ಕೂಡ ಸರ್ಕಾರಿ ಕನ್ನಡ ಶಾಲೆಗಳ ಪ್ರವೇಶಾತಿ ಮೇಲೆ ಪರಿಣಾಮ ಬೀರಿದೆ. ಇನ್ನೂ ಕೆಲವು ಕಡೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಮತ್ತು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತೀವ್ರ ಕುಸಿತ ಆಗಿರುವುದು ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣ ಎನ್ನುವ ಚರ್ಚೆ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿದೆ.

ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 37 ಕಾಯಂ ಶಿಕ್ಷಕರು ಇರಬೇಕು. ಆದರೆ, ಕೇವಲ ಐವರು ಕಾಯಂ ಶಿಕ್ಷಕರು ಮಾತ್ರ ಇದ್ದಾರೆ. ಗೌರಿಪುರ ರಾಷ್ಟ್ರೀಯ ಮಾಧ್ಯಮಿಕ ಮಾದರಿ ಶಾಲೆಯಲ್ಲಿ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ಸೋಮಸಾಗರದಲ್ಲಿ ಒಬ್ಬರು, ಹುಲಿಹೈದರದಲ್ಲಿ ಮೂವರು, ಕಲಕೇರಿಯಲ್ಲಿ ಇಬ್ಬರು ಹೀಗೆ ಅನೇಕ ಕಡೆ ಕಾಯಂ ಶಿಕ್ಷಕರ ಕೊರತೆ ಕಾಡುತ್ತಿದೆ.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಗೆ ಸೇರಿಸಲು ಸರ್ಕಾರ ಐದು ವರ್ಷ ಐದು ತಿಂಗಳು ಮಾಡಿರುವ ಕಡ್ಡಾಯ ನಿಯಮವೂ ನೋಂದಣಿ ಕಡಿಮೆಯಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.