
ಕೊಪ್ಪಳ: ‘ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ, ಅಗತ್ಯ ಅನುದಾನದ ಬೇಡಿಕೆ ಮತ್ತು ವಿವರ ಮಾಹಿತಿಯೊಂದಿಗೆ ಯೋಜನಾ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಪ್ರತಿ ಗ್ರಾಮಗಳಲ್ಲಿ ಪಂಚಾಯಿತಿಯಿಂದ ಗ್ರಾಮಸಭೆಗಳನ್ನು ನಡೆಸಬೇಕು. ಗ್ರಾಮಗಳ ಮೂಲಭೂತ ಸೌಕರ್ಯಗಳಿಗೆ ಅವಶ್ಯಕವಿರುವ ಕಾಮಗಾರಿ, ಕಾರ್ಯಕ್ರಮಗಳನ್ನೊಳಗೊಂಡ ಕರಡು ಅಭಿವೃದ್ಧಿ ಯೋಜನೆಯನ್ನು ತಯಾರಿಸಿ ಅನುಮೋದನೆ ಪಡೆದು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು.
‘ನಗರ ಸ್ಥಳೀಯ ಸಂಸ್ಥೆಗಳು ವಾರ್ಡ್‌ಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಿ, ಯೋಜನೆಯನ್ನು ತಯಾರಿಸಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಸಲ್ಲಿಸಬೇಕು’ ಎಂದರು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಯೋಜನೆಗಳ ವರದಿಯನ್ನು ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು. ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದ ಯೋಜನೆಗಳನ್ನು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಮತ್ತು ಯೋಜನಾ ಸಮಿತಿಗೆ ಸಲ್ಲಿಸಬೇಕು’ ಎಂದರು.
ಜಿಲ್ಲಾ ಯೋಜನಾ ಸಮಿತಿಯು ಅಭಿವೃದ್ಧಿ ಯೋಜನಾ ಕರಡನ್ನು ತಯಾರಿಸುವಾಗ ಪ್ರಾದೇಶಿಕ ಯೋಜನೆ ನೀರಿನ ಹಂಚಿಕೆ ಮತ್ತು ಇತರೆ ಭೌತಿಕ ಮತ್ತು ಪ್ರಾಕೃತಿಕ ಸಂಪನ್ಮೂಲಗಳ ಹಂಚಿಕೆ, ಮೂಲ ಪರಿಕರಗಳ ಸಮಗ್ರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಇವುಗಳನ್ನು ಒಳಗೊಂಡಂತೆ ಗ್ರಾಮೀಣ ಹಾಗೂ ನಗರ ಪ್ರದೇಶಗಳ ನಡುವಣ ಸಮಾನ ಹಿತಾಸಕ್ತಿ ವಿಷಯಗಳು, ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಾರ್ಯಕ್ರಮಗಳು ಪ್ರತಿರೂಪಗಳಿರದಂತೆ ಗಮನ ಹರಿಸಬೇಕು’ ಎಂದರು.
ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ಮಂಜುನಾಥ.ಡಿ ಮಾತನಾಡಿ, ಜಿಲ್ಲಾ ಯೋಜನಾ ಸಮಿತಿಯ ಕಾರ್ಯವಿಧಾನಗಳು, ಜಿಲ್ಲಾ ಮಾನವ ಅಭಿವೃದ್ಧಿ ವರದಿ-2025 ಮತ್ತು ಜಿಲ್ಲಾ ಮಾನವ ಅಭಿವೃದ್ಧಿ ವರದಿ-2031ರ ತಯಾರಿ ಕುರಿತು ಸಚಿವರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಯೋಜನಾ ಸಮಿತಿ ಸದಸ್ಯ ಕಲ್ಲಭಾಗಿಲಮಠ ಸಿದ್ದೇಶ ಕುಮಾರ, ಈಶಪ್ಪ ಅಮರಪ್ಪ ಇಟ್ಟಂಗಿ, ಸೋಮಶೇಖರಪ್ಪ ಭೇರಗಿ, ಬಾಲರಾಜ ಗಾಳಿ, ಪರಶುರಾಮ ನಾಯಕ, ಶಿವನಗೌಡ ಪುಂಡಗೌಡ್ರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.