
ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಮನವಿ ಸಲ್ಲಿಸಿದರು
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ತೆರಳುವಾಗಿ ಸಂಚಾರ ನಿಯಮ ಉಲ್ಲಂಘಿಸಿದ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ ಸದಸ್ಯರು ಆಗ್ರಹಿಸಿದ್ದಾರೆ.
ಈ ಕುರಿತು ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಅವರಿಗೆ ಮನವಿ ಸಲ್ಲಿಸಲಾಗಿದ್ದು, ‘ಅಕ್ಟೋಬರ್ 5ರಂದು ಮುಖ್ಯಮಂತ್ರಿ ಸಿಂಧನೂರಿನಲ್ಲಿ ನಡೆದ ಕಾರ್ಯಕ್ರಮ ಭಾಗವಹಿಸಿ ಮರಳಿ ಗಂಗಾವತಿ ಮೂಲಕ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬರುವ ಕೆಲವೇ ಸೆಕೆಂಡುಗಳ ಮೊದಲು ಎಡ ಬದಿ ಇದ್ದ ರೆಡ್ಡಿ ಅವರ ಕಾರು ಏಕಾಏಕಿ ರಸ್ತೆ ವಿಭಜಕ ದಾಟಿ ವಿರುದ್ಧ ದಿಕ್ಕಿನಲ್ಲಿ ಸಾಗಿ ನಿಯಮ ಉಲ್ಲಂಘಿಸಿದೆ’ ಎಂದಿದ್ದಾರೆ.
‘ಇದು ಜನಾರ್ದನ ರೆಡ್ಡಿ ಅವರ ದರ್ಪ ಹಾಗೂ ದುರಹಂಕಾರ ಎತ್ತಿ ತೋರಿಸುತ್ತದೆ. ರೆಡ್ಡಿ ಅವರ ಒಂದು ಕಾರು ಅಲ್ಲದೆ ಅವರ ಬೆಂಬಲಿಗರ ಎರಡು ಕಾರುಗಳು ಸಹ ಅವರನ್ನು ಹಿಂಬಾಲಿಸಿವೆ. ರಾಜ್ಯ ಹಾಗೂ ರಾಷ್ಟ್ರದ ಅತಿ ಗಣ್ಯರು ಆಗಮಿಸುವ ವೇಳೆ ಅವರ ಭದ್ರತೆ ಹಾಗೂ ಸಮಯ ಪಾಲನೆಗಾಗಿ ಝೀರೋ ಟ್ರಾಫಿಕ್ ಹಾಗೂ ಕಾನ್ ವೇಯಂತಹ ಕಾನೂನು ಜಾರಿಗೆ ತರಲಾಗಿದೆ. ಹೀಗಿದ್ದರೂ ಶಾಸಕರು ನಿಯಮ ಉಲ್ಲಂಘಿಸಿದ್ದು ಸರಿಯೇ’ ಎಂದು ಸೇನೆಯ ಕೊಪ್ಪಳ ತಾಲ್ಲೂಕು ಅಧ್ಯಕ್ಷ ಕುಬೇರ ಮಜ್ಜಿಗಿ ಪ್ರಶ್ನಿಸಿದ್ದಾರೆ.
‘ರೆಡ್ಡಿ ಮೊದಲಿನಿಂದಲೂ ಸಿದ್ದರಾಮಯ್ಯನವರ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತ ಬಂದಿರುವುದನ್ನು ಗಮನಿಸಿದ್ದೇವೆ. ಹಾಗಾಗಿ ಸಿದ್ದರಾಮಯ್ಯನವರ ಜೀವಕ್ಕೆ ಧಕ್ಕೆ ತರುವ ದುರುದ್ದೇಶ ಕಂಡು ಬರುತ್ತದೆ. ತಪ್ಪಿತಸ್ಥ ರೆಡ್ಡಿ ವಿರುದ್ಧ ಕ್ರಮ ಕೈಗೊಂಡ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಮುಖಂಡರಾದ ಹನುಮಂತಪ್ಪ ಕೌದಿ, ಗವಿಸಿದ್ದಪ್ಪ ಮುದ್ದಿ, ಸೀಮಣ್ಣ ಗಬ್ಬೂರ, ಮಂಜುನಾಥ್ ಬಂಗಾಳಿ, ನಿಂಗಪ್ಪ ಮೂಗಿನ, ಮಲ್ಲೇಶ್ ಹದ್ದಿನ್, ಮಂಜುನಾಥ ಮ್ಯಾಗಳಮನಿ, ಆನಂದ ಹಳ್ಳಿಗುಡಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.