ಕುಷ್ಟಗಿ: ಗ್ರಾಮ ಪಂಚಾಯಿತಿ ಮನಸ್ಸು ಮಾಡಿದ್ದರೆ ಸ್ವಚ್ಛಂದ ಪರಿಸರದಲ್ಲಿ ನೀರಿನ ಜುಳು ಜುಳು ನಿನಾದ ಮನಕ್ಕೆ ಮುದನೀಡಬಹುದಾಗಿತ್ತು. ಗ್ರಾಮದ ಹೊರವಲಯದಲ್ಲಿ ರಸ್ತೆ ಪಕ್ಕದಲ್ಲಿ ಜನರ ಗಮನಸೆಳೆಯುವಂತೆ ಒಂದು ಸುಂದರ ಕೊಳವನ್ನಾಗಿಸಿ ಜನರಿಗೆ ಪ್ರಾಯೋಗಿಕವಾಗಿ ನೈಸರ್ಗಿಕ ಜಲಮೂಲದ ಸಂರಕ್ಷಣೆ ಪಾಠ ಮಾಡಬಹುದಿತ್ತು. ಮುಳ್ಳುಕಂಟಿಗಳನ್ನು ತೆರವುಗೊಳಿಸಿದ್ದರೆ ಅದೊಂದು ವೈವಿಧ್ಯಮಯ ಕಣ್ಮನಸೆಳೆಯುವ ವಿಹಾರ ತಾಣವನ್ನಾಗಿಸುವುದಕ್ಕೆ ಎಲ್ಲ ಅವಕಾಶಗಳೂ ಇವೆ. ಆದರೆ, ಹಳ್ಳ, ಕೊಳವೆಲ್ಲ ಮಲಿನ ಮಡುವಾಗಿ ಪರಿವರ್ತನೆಗೊಂಡಿದೆ.
ಇದು ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದ ಹುಲಿಯಾಪುರ ಮಾರ್ಗದ ರಸ್ತೆಯ ಬದಿಯಲ್ಲಿನ ಅಡ್ಯಾಳ ಹಳ್ಳದಲ್ಲಿ ಕಣ್ಣಿಗೆ ರಾಚುವ ಚಿತ್ರಣ. ಇದೇ ಊರಲ್ಲಿಯೇ ಇರುವ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯಕ್ಕೆ ಜ್ವಲಂತ ಸಾಕ್ಷಿ ಒದಗಿಸುವ ಈ ಹಳ್ಳ ಮತ್ತು ಕೊಳದ ಸ್ಥಿತಿಯನ್ನು ಗಮನಿಸುವ ದಾರಿಹೋಕರು ಶಪಿಸದೇ ಇರಲಾರರು. ಜಲಮೂಲಗಳು ಮಾಲಿನ್ಯಗೊಳ್ಳಬಾರದು ಎಂಬ ಆಶಯ ಮತ್ತು ದೂರದೃಷ್ಟಿಯಲ್ಲಿ ಜನರಿಗೆ ತಿಳಿವಳಿಕೆ ಮೂಡಿಸಬೇಕಿರುವ ಪಂಚಾಯಿತಿಯೇ ಗ್ರಾಮದಲ್ಲಿ ನಿತ್ಯ ಸಂಗ್ರಹವಾಗುವ ಮೂಟೆಗಟ್ಟಲೇ ಪ್ಲಾಸ್ಟಿಕ್, ಕೊಳಚೆ, ಕೊಳೆತ ಸಾಮಗ್ರಿಗಳು, ಸತ್ತ ಪ್ರಾಣಿಗಳು, ಆಸ್ಪತ್ರೆಗಳ ತ್ಯಾಜ್ಯ ಹೀಗೆ ಅಪಾಯಕಾರಿ, ವಿಷಕಾರಿ ಘನತ್ಯಾಜವನ್ನು ವಿವೇಚನೆ ಮರೆತು ವಿಲೇವಾರಿ ಮಾಡುವುದಕ್ಕೆ ಕೊಳದಂತಿರುವ ಹಳ್ಳವನ್ನೇ ಆಯ್ಕೆ ಮಾಡಿಕೊಂಡಿರುವುದು ದುರಂತ ಎಂಬುದು ಜನರ ಅಸಮಾಧಾನ.
ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಪಂಚಾಯಿತಿ ವ್ಯವಸ್ಥೆ ಮಾಡಿಕೊಂಡಿಲ್ಲ, ವಾಹನದಲ್ಲಿ ತುಂಬಿಕೊಂಡು ನೇರವಾಗಿ ತಂದು ಅಡ್ಯಾಳ ಹಳದಲ್ಲಿ ಅಳುಕಿಲ್ಲದೆ ಸುರಿಯಲಾಗುತ್ತಿದೆ. ಈ ವರ್ಷದಲ್ಲಿ ಉತ್ತಮ ಮಳೆಯಿಂದ ಹಳ್ಳಕ್ಕೆ ಮತ್ತು ಪಕ್ಕದಲ್ಲಿರುವ ಅಡ್ಯಾಳ ಕೆರೆಗೆ ಜೀವಕಳೆ ಬಂದಿದ್ದರೂ ತ್ಯಾಜ್ಯ ಹಾಕುತ್ತಿರುವುದರಿಂದ ದುರ್ಗಂಧ ಬೀರುತ್ತಿದೆ. ನೀರಿನಲ್ಲಿ ಕಾಲಿಡುವಂತಿಲ್ಲ, ಜಾನುವಾರುಗಳಿಗೆ ಕುಡಿಸುವಂತಿಲ್ಲ. ತೋಟಪಟ್ಟಿಗಳಿಗೆ ಹರಿಸಿಕೊಳ್ಳಬೇಕೆಂದರೆ ತರಹೇವಾರಿ ಅಪಾಯಕಾರಿ ತ್ಯಾಜ್ಯದಿಂದ ನೀರು ಬಳಕೆಗೆ ಯೋಗ್ಯವಿಲ್ಲದಂತಾಗಿದೆ. ಸುತ್ತಲೂ ಮುಳ್ಳು ಕಂಟಿಗಳು ಬೆಳೆದು ನಿಂತಿವೆ. ಜಲಮೂಲಗಳ ಸಂರಕ್ಷಣೆ ಪರಿಕಲ್ಪನೆಯಲ್ಲಿ ಗ್ರಾಪಂ ಮೂಲಕ ನರೇಗಾದಲ್ಲಿ ‘ಅಮೃತ ಸರೋವರ’ಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಅದಕ್ಕೆ ಯೋಗ್ಯವಿರುವ ಅಡ್ಯಾಳ ಹಳ್ಳವನ್ನು ಹಿರೇಮನ್ನಾಪುರ ಪಂಚಾಯಿತಿ ಮಾತ್ರ ಕೊಳಚೆ ಕೊಳವನ್ನಾಗಿಸಿರುವುದು ಕಂಡುಬಂದಿದೆ.
ಇದೇ ಹಳ್ಳದ ಬಳಿ ಪಂಚಾಯಿತಿಯ ಕುಡಿಯುವ ನೀರಿನ ಕೊಳವೆಬಾವಿಗಳಿದ್ದು ಮಲಿನ ನೀರು ಗ್ರಾಮಕ್ಕೆ ಸರಬರಾಜುತ್ತಿದೆ ಎಂದು ಗ್ರಾಮಸ್ಥರಾದ ಬಸವರಾಜ ಪಾಟೀಲ, ಹನುಮಗೌಡ, ವೀರೇಶ ಇತರರು ದೂರಿದರು.
ಸ್ವಚ್ಛವಾಗಿದ್ದ ಹಳ್ಳವನ್ನು ಗ್ರಾಪಂ ಅಧಿಕಾರಿಗಳೇ ಕಸ ಹಾಕಿ ಹೊಲಸೆಬ್ಬಿಸಿದ್ದಾರೆ ಇಡೀ ಪ್ರದೇಶ ಮಲಿನವಾಗಿ ದುರ್ನಾತ ಬೀರುತ್ತಿದೆ.– ವೀರೇಶ ತೋಟದ, ಹಿರೇಮನ್ನಾಪುರ ರೈತ
ಜಲಮೂಲಗಳ ಸಂರಕ್ಷಣೆಯಲ್ಲಿ ಗ್ರಾಪಂಗಳು ಜನರನ್ನು ಜಾಗೃತಿಗೊಳಿಸಬೇಕು ಆದರೆ ಅಡ್ಯಾಳ ಹಳ್ಳದಲ್ಲೇ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದು ಗಮನಕ್ಕಿಲ್ಲ. ಈ ಬಗ್ಗೆ ಪಿಡಿಒಗೆ ತಾಕೀತು ಮಾಡುತ್ತೇನೆ.– ಪಂಪಾಪತಿ ಹಿರೇಮಠ, ತಾಪಂ ಕಾರ್ಯನಿರ್ವಹಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.