
ಅಳವಂಡಿ: ‘ನೀರಾವರಿ ಈ ಭಾಗದ ಅನೇಕ ರೈತರ ಅನೇಕ ವರ್ಷಗಳ ಕನಸಾಗಿತ್ತು. ಹಾಗಾಗಿ ನೀರಾವರಿ ಯೋಜನೆಗೆ ಅನುದಾನ ಮಂಜೂರು ಮಾಡಿಸಿ, ಈ ಭಾಗದ ಬಹುದಿನಗಳ ಬೇಡಿಕೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಕೊಪ್ಪಳ ತಾಲ್ಲೂಕಿನ ಗೊಂಡಬಾಳ ಜಿ.ಪಂ ವ್ಯಾಪ್ತಿಯ ಕುಣಿಕೇರಿ ತಾಂಡಾ, ಕುಣಿಕೇರಿ, ಲಾಚನಕೇರಿ, ಕರ್ಕಿಹಳ್ಳಿ, ಚಿಕ್ಕಬಗನಾಳ ಹಿರೇಬಗನಾಳ, ಕಾಸನಕಂಡಿ ಮತ್ತು ಅಲ್ಲಾನಗರ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
‘ಯೋಜನೆಯಿಂದ 236 ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ನೀರಾವರಿ ಯೋಜನೆಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಆದ್ದರಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡುವ ಕೆಲಸ ಮಾಡುತ್ತಿದ್ದೇವೆ’ ಎಂದರು.
ನಂತರ ಕರ್ಕಿಹಳ್ಳಿ ಗ್ರಾಮದಲ್ಲಿ ಕರ್ಕಿಹಳ್ಳಿ ಸೈಟ್–1 ಹಾಗೂ ಕರ್ಕಿಹಳ್ಳಿ ಸೈಟ್–2, ಚಿಕ್ಕಬಗನಾಳ ಹಾಗೂ ಹಿರೇಬಗನಾಳ ಏತ ನೀರಾವರಿ ಯೋಜನೆ ಹಾಗೂ ಲಾಚನಕೇರಿ ಗ್ರಾಮದಲ್ಲಿ 344 ಎಕರೆ ನೀರಾವರಿ ಪ್ರದೇಶದ ಕಾಮಗಾರಿಗೆ ಹಾಗೂ ಎಸ್.ಟಿ ಸಮಾಜದ ಆಯ್ದ ಫಲಾನುಭವಿಗಳಿಗೆ ತುಂಗಭದ್ರಾ ಹಿನ್ನೀರಿನಿಂದ ಏತ ನೀರಾವರಿ ಸೌಲಭ್ಯ ಒದಗಿಸುವ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿದರು.
ಪ್ರಮುಖರಾದ ಪ್ರಸನ್ನ ಗಡಾದ, ಗೂಳಪ್ಪ ಹಲಗೇರಿ, ಗವಿಸಿದ್ದಪ್ಪ ಕರಡಿ, ಜಡಿಯಪ್ಪ ಬಂಗಾಳಿ, ಹೇಮಣ್ಣ ದೇವರಮನಿ, ವಿರೂಪಣ್ಣ, ತೋಟಪ್ಪ ಕಾಮನೂರು, ಕೆ.ಎಂ.ಸಯ್ಯದ್, ಹನುಮೇಶ ಹೊಸಳ್ಳಿ, ಜಗದೀಶ ಕರ್ಕಿಹಳ್ಳಿ, ಗವಿಸಿದ್ದಪ್ಪ ಕುಂಬಾರ, ಅಸ್ಮಾನಾಸಾಬ್, ಚಾಂದ್ ಪಾಷಾ, ಯಂಕಪ್ಪ, ಬನ್ನೇಪ್ಪಗೌಡ, ದಾದಾಪೀರ್, ರವಿ, ಧರ್ಮರಾಜ, ದೇವೇಂದ್ರಪ್ಪ, ಮಾರುತಿ, ಮಲ್ಲು ಪೂಜಾರ, ಅಕ್ಬರ್ ಪಲ್ಟಾನ, ರವಿ, ನಿಂಗಪ್ಪ, ತಾ.ಪಂ ಇಒ ದುಂಡಪ್ಪ ತುರಾದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.