
ಅಳವಂಡಿ: ಕಂಪ್ಲಿ ಕ್ರಾಸ್–ಅಳವಂಡಿ ರಸ್ತೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ದೂಳಿನ ಮಜ್ಜನ ಸಾಮಾನ್ಯವಾಗಿದೆ.
ಈಗಾಗಲೇ ಅಳವಂಡಿಯಿಂದ ಬೆಳಗಟ್ಟಿವರೆಗೆ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಅಳವಂಡಿ ಗ್ರಾಮದ ಮುಖ್ಯ ರಸ್ತೆಯ ಮುಕ್ಕಾಲು ಭಾಗ ಸಿಸಿ ರಸ್ತೆ ಕಾಮಗಾರಿ ಮುಗಿದಿದೆ. ಸದ್ಯ ಕಂಪ್ಲಿ ಕ್ರಾಸ್‌ನಿಂದ ಅಳವಂಡಿ ನಡುವಿನ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದೆ.
ಅಳವಂಡಿಯಿಂದ ಕಂಪ್ಲಿ ಕ್ರಾಸ್‌ವರೆಗೆ ರಸ್ತೆ ಅಗೆದು, ಜಲ್ಲಿಕಲ್ಲು ಹಾಕಲಾಗಿದೆ. ಜಲ್ಲಿಕಲ್ಲಿನ ಮೇಲೆ ವಾಹನಗಳು ಸಂಚರಿಸುವಾಗ ರಸ್ತೆ ಸಂಪೂರ್ಣ ದೂಳುಮಯವಾಗಿರುತ್ತದೆ. ನಿತ್ಯ ಕೊಪ್ಪಳದಿಂದ ಅಳವಂಡಿ ಗ್ರಾಮಕ್ಕೆ ಬರುವ ಸವಾರರನ್ನು ದೂಳು ಸ್ವಾಗತಿಸುತ್ತದೆ.
ಈ ರಸ್ತೆ ಮಧ್ಯೆ ಪ್ರೌಢಶಾಲೆ, ವಸತಿ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಶಾಲಾ ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ಜನರು ಹಾಗೂ ಮುಂಡರಗಿ–ಕೊಪ್ಪಳ ನಗರಕ್ಕೆ ಪ್ರಯಾಣಿಸುವ ಜನರಿಗೆ ದೂಳಿನ ಸ್ನಾನ ಅನಿವಾರ್ಯವಾಗಿದೆ.
ಈ ರಸ್ತೆಯ ಪ್ರಯಾಣಿಕರ ಬಟ್ಟೆಗಳು ದೂಳಿನಲ್ಲಿ ಮಿಂದೇಳುತ್ತವೆ. ದೂಳಿನ ಬಟ್ಟೆ ತೊಟ್ಟು ವಿವಿಧ ಕಾರ್ಯಗಳಿಗೆ ಹೋಗಿ ಬರುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯರು.
‘ಮುಖ್ಯ ಕಾಮಗಾರಿಯನ್ನು ತ್ವರಿತವಾಗಿ ಮುಗಿಸದೇ, ಗುತ್ತಿಗೆದಾರರು ರಸ್ತೆಗೆ ಜಲ್ಲಿಕಲ್ಲು ಹಾಕಿ, ಮೈ ಮರೆತಿದ್ದಾರೆ. ನಿತ್ಯ ಟ್ಯಾಂಕರ್ ಮೂಲಕ ರಸ್ತೆಗೆ ಐದಾರು ಬಾರಿ ನೀರು ಸಿಂಪಡಿಸಬೇಕು. ಆದರೆ, ತಮಗೆ ತಿಳಿದಾಗ ಮಾತ್ರ ರಸ್ತೆಗೆ ನೀರು ಸಿಂಪಡಿಸುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಗಮನ ಹರಿಸಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮಗಾರಿ ಕುರಿತು ಮಾಹಿತಿ ಪಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ‘ಪ್ರಜಾವಾಣಿ’ ಪ್ರತಿನಿಧಿ ಕರೆ ಮಾಡಿದರೆ, ಕರೆ ಸ್ವೀಕರಿಸಲಿಲ್ಲ.
‘ಶಾಸಕರು ಇತ್ತ ಗಮನಹರಿಸಲಿ’
ಅಳವಂಡಿ ಹೋಬಳಿ ಕೇಂದ್ರವಾಗಿದ್ದು ಕೆಲಸದ ನಿಮಿತ್ತ ನಿತ್ಯ ಇಲ್ಲಿಗೆ ನೂರಾರು ಜನ ಹಾಗೂ ಶಾಲಾ–ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹಾಗೂ ದೂಳಿನ ಸಮಸ್ಯೆ ಕಾಡುತ್ತಿದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಈ ಬಗ್ಗೆ ಗಮನಹರಿಸಿ ಕಾಮಗಾರಿ ಬೇಗ ಮುಗಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂದು ಜನ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.