ADVERTISEMENT

ಅಳವಂಡಿ: ವೈಭವದ ಸಿದ್ಧೇಶ್ವರ ಮಹಾರಥೋತ್ಸವ

ಜಾತ್ರೆಯಲ್ಲಿ ಭಕ್ತಿ ಮೆರೆದ ಸಹಸ್ರಾರು ಭಕ್ತರು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:24 IST
Last Updated 31 ಜನವರಿ 2026, 7:24 IST
ಅಳವಂಡಿ ಸಿದ್ಧೇಶ್ವರ ಜಾತ್ರೆ ಮಹಾರಥೋತ್ಸವ ಅಂಗವಾಗಿ ರಥವನ್ನು ಶೃಂಗರಿಸಲಾಗುತ್ತಿರುವುದು
ಅಳವಂಡಿ ಸಿದ್ಧೇಶ್ವರ ಜಾತ್ರೆ ಮಹಾರಥೋತ್ಸವ ಅಂಗವಾಗಿ ರಥವನ್ನು ಶೃಂಗರಿಸಲಾಗುತ್ತಿರುವುದು   

ಅಳವಂಡಿ: ಭಾವೈಕ್ಯತೆ, ಶ್ರದ್ಧಾ ಭಕ್ತಿಯ ಕೇಂದ್ರ ಅಳವಂಡಿಯ ಸಿದ್ದೇಶ್ವರನ ಮಹಾರಥೋತ್ಸವ ಶುಕ್ರವಾರ ಸಡಗರದಿಂದ ಜರುಗಿತು. ಮಹಾರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಯಾವುದೇ ಧರ್ಮ, ಬೇಧವಿಲ್ಲದೆ ಸಹಸ್ರಾರು ಜನರು ಜಾತ್ರೆಯಲ್ಲಿ ಭಕ್ತಿ ಮೆರೆದರು.

ಮುಂಜಾನೆಯ ಸೂರ್ಯನ ಕಿರಣಗಳು ಭೂಮಿಗೆ ತಾಕುವುದಕ್ಕಿಂತ ಮೊದಲೇ ಭಕ್ತರು ಸಿದ್ದೇಶ್ವರನ ದರ್ಶನ ಪಡೆದರು. ಭಕ್ತರು ಸಿದ್ದೇಶ್ವರನಿಗೆ ಅಲಂಕಾರಿಕ ಹೂವುಗಳಿಂದ ಅಲಂಕರಿಸಿ, ಅಭಿಷೇಕ ಮಾಡಿಸಿ, ನೈವೇದ್ಯ ಕಾಯಿ ಮತ್ತು ಕರ್ಪೂರ ಸಲ್ಲಿಸಿದರು. ಮಠದ ಸಿದ್ದೇಶ್ವರ, ಶಾಂತಮ್ಮ ದೇವಿ, ವೀರಭದ್ರೇಶ್ವರ, ಬಸವೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.

ರಥೋತ್ಸವಕ್ಕೂ ಮೊದಲು ಧ್ವಜ ಲೀಲಾವು ಕಾರ್ಯಕ್ರಮ ನಡೆಯಿತು. ಭಕ್ತರು ಬಣ್ಣದೋಕುಳಿ ಆಡಿ, ಸಂಭ್ರಮ ಪಟ್ಟರು. ನಂತರ ಮಠದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಧ್ವಜಾರೋಹಣ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.

ADVERTISEMENT

ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಸಿದ್ದೇಶ್ವರ ಮಹಾರಾಜ್ ಕೀ ಜೈ... ಮರುಳಾರಾಧ್ಯ ಮಹಾರಾಜ್ ಕೀ ಜೈ... ಎಂಬ ಘೋಷಣೆಗಳು ಮೊಳಗಿದವು. ಭಕ್ತರು ಸಿದ್ಧೇಶ್ವರನ ಮಹಾ ರಥೋತ್ಸವಕ್ಕೆ ಉತ್ತತ್ತಿ, ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.

ರಥೋತ್ಸವವು ಪಾದಗಟ್ಟಿವರೆಗೂ ತಲುಪಿ ನಂತರ ಹಿಂತಿರುಗಿತು. ರಥೋತ್ಸವ ಯಶಸ್ವಿಯಾಗಿ ಮರಳಿ ಸ್ಥಳಕ್ಕೆ ಬಂದು ನಿಂತಾಗ ಭಕ್ತರ ಚಪ್ಪಾಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ರಥೋತ್ಸವದ ಮುಂದೆ ಭಜನೆ, ಬಾಂಜ್ ಮೇಳ, ಡೊಳ್ಳಿನ ಮೇಳ, ವಿವಿಧ ಮೋಜು ಮಜಲುಗಳು ಭಕ್ತರ ಗಮನ ಸೆಳೆದವು. ಮೆರವಣಿಗೆ ತೇರಿನ ಮುಂದೆ ಸಾಗಿ ರಥೋತ್ಸವಕ್ಕೆ ಕಳೆ ತಂದವು.

ಜಾತ್ರೆಯ ನಿಮಿತ್ತ ಗ್ರಾಮವು ಅಲಂಕಾರಿಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದಲ್ಲಿ ಮನೆ ಮನೆಯಲ್ಲೂ ಸಂಭ್ರಮ ಮನೆ ಮಾಡಿತ್ತು. ಮನೆ ಮುಂದೆ ರಂಗೋಲಿ ಹಾಕಿ ಅಲಂಕಾರ ಮಾಡಲಾಗಿತ್ತು. 

ದೇವಸ್ಥಾನದ ಮಂಭಾಗದಲ್ಲಿ ಕಾಯಿ, ಕರ್ಪೂರ, ಹೂವಿನ ಹಾರ, ಮಕ್ಕಳ ಆಟಿಕೆ ಸಾಮಗ್ರಿ, ತರಹೇವಾರಿ ತಿನಿಸು ವಿವಿಧ ಅಂಗಡಿಗಳಲ್ಲಿ ಖರೀದಿ ಹಾಗೂ ಜೋಕಾಲಿ ಆಡುವ ಮೂಲಕ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.