ADVERTISEMENT

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಉಲ್ಮಾ, ಮುಸ್ಲಿಮರ ತ್ಯಾಗದ ಅವಲೋಕನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 6:16 IST
Last Updated 27 ಜನವರಿ 2023, 6:16 IST
ಕೊಪ್ಪಳದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯುಸೂಫಿಯಾ ಮಸೀದಿಯ ಹಜರತ್‌ ಮುಫ್ತಿ ನಜೀರ್‌ ಅಹ್ಮದ್‌ ಖಾದ್ರಿ ತಸ್ಕೀನ್‌ ಮಾತನಾಡಿದರು
ಕೊಪ್ಪಳದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯುಸೂಫಿಯಾ ಮಸೀದಿಯ ಹಜರತ್‌ ಮುಫ್ತಿ ನಜೀರ್‌ ಅಹ್ಮದ್‌ ಖಾದ್ರಿ ತಸ್ಕೀನ್‌ ಮಾತನಾಡಿದರು   

ಕೊಪ್ಪಳ: ‘ಬ್ರಿಟಿಷರ ದಾಸ್ಯದಿಂದ ಮುಕ್ತಿಪಡೆಯಲು ಧರ್ಮ, ಜಾತಿ, ಪಂಥದ ಸಂಕೋಲೆಯನ್ನು ನೋಡದೇ ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವದಿಂದ ಹೋರಾಟ ಮಾಡಿದ್ದರಿಂದಲೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಅದೇ ರೀತಿ ಈಗಲೂ ಎಲ್ಲರಲ್ಲಿಯೂ ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆ ಗಟ್ಟಿಯಾಗಿ ಮೂಡಲಿ’ ಎಂದು ಸಮಾಜದ ಮುಖಂಡ ಅಣ್ಣಿಗೇರಿಯ ಅಬ್ದುಲ್‌ ಖಾದರ್‌ ಸಾಬ್‌ ಹೇಳಿದರು.

74ನೇ ಗಣರಾಜ್ಯೋತ್ಸವ ಅಂಗವಾಗಿ ಜಮೀಯುತುಲ್‌ ಉಲ್ಮಾ ಜಿಲ್ಲಾ ಸಮಿತಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಉಲ್ಮಾ ಹಾಗೂ ಮುಸ್ಲಿಮರ ತ್ಯಾಗ ಮತ್ತು ಬಲಿದಾನ’ ಎನ್ನುವ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಗಣರಾಜ್ಯೋತ್ಸವವನ್ನು ನಾವೆಲ್ಲ ಇಂದು ಹಬ್ಬವೆಂದು ಸಂಭ್ರಮಿಸುತ್ತಿರುವುದರ ಹಿಂದೆ ದೊಡ್ಡವರ ತ್ಯಾಗವಿದೆ. ಟಿಪ್ಪು ಸುಲ್ತಾನ್‌ ದೇಶಕ್ಕಾಗಿ ಹೋರಾಡುವಾಗ ಎಲ್ಲರಲ್ಲಿಯೂ ಭಾವೈಕ್ಯದ ಭಾವವಿತ್ತು. ಹುಸೇನ್‌ ಮದನಿ ಎಂಬುವರು ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಜನರನ್ನು ಹುರಿದುಂಬಿಸಿದರು. ಎಲ್ಲಾ ಸಮುದಾಯದವರು ಧರ್ಮದ ರಕ್ಷಣೆಗಾಗಿ ಮಾಡಿದ ಹೋರಾಟವನ್ನು ದೇಶದ ರಕ್ಷಣೆಗೂ ಮಾಡಿದ್ದಾರೆ’ ಎಂದು ಪ್ರತಿಪಾದಿಸಿದರು.

ADVERTISEMENT

‘ದೇಶದ ಹೋರಾಟಕ್ಕಾಗಿ ಜಾತಿ, ಮತವನ್ನು ಯಾರೂ ನೋಡಲಿಲ್ಲ. ಈಗಲೂ ದೇಶದಲ್ಲಿ ಅನೇಕ ಧರ್ಮ ಹಾಗೂ ಪಂಥಗಳು ಇದ್ದರೂ ಅವರವರ ಆಚರಣೆಗೆ ಅವರಿಗೆ ಇದ್ದೇ ಇರುತ್ತದೆ. ದೇಶ ರಕ್ಷಣೆಯ ವಿಷಯ ಬಂದಾಗ ನಾವೆಲ್ಲ ಒಂದೇ ಎನ್ನುವುದೇ ಪ್ರಧಾನವಾಗುತ್ತದೆ’ ಎಂದರು.

ಯುಸೂಫಿಯಾ ಮಸೀದಿಯ ಹಜರತ್‌ ಮುಫ್ತಿ ನಜೀರ್‌ ಅಹ್ಮದ್‌ ಖಾದ್ರಿ ತಸ್ಕೀನ್‌ ಮಾತನಾಡಿ ‘ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂ, ಮುಸ್ಲಿಂ, ಸಿಖ್‌ ಹೀಗೆ ಎಲ್ಲ ಧರ್ಮದವರು ಹೋರಾಡಿದ್ದಾರೆ. ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಆಚರಣೆಯ ಹಿಂದೆ ಅನೇಕ ಮುಸ್ಲಿಂ ಹೋರಾಟಗಾರರ ಕೊಡುಗೆಯೂ ಇದೆ. ಸಣ್ಣ ವಯಸ್ಸಿನಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಶ್ಫಾಕುಲ್ಲಾ ಖಾನ್‌ ಸೇರಿದಂತೆ ಅನೇಕರ ಬಲಿದಾನದ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಿದೆ’ ಎಂದರು.

ಜಮೀಯುತುಲ್‌ ಉಲ್ಮಾ ಜಿಲ್ಲಾ ಸಮಿತಿಯ ಅಧ್ಯಕ್ಷ ಮೌಲಾನ ಮುಫ್ತಿ ಹುಸೇನ್‌ ಸಾಹೇಬ್‌, ಮಹಮ್ಮದ್‌ ಅಲಿ ಹಿಮಾಯತಿ, ರಾಯಚೂರಿನ ಶಾಮೀದ್‌ ಅಲಿ, ಇಮ್ತಿಯಾಜ್‌ ಅನ್ಸಾರಿ, ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಪೀರಾಹುಸೇನ್‌ ಆರ್‌. ಹೊಸಳ್ಳಿ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬೊಳ್ಳಿಳ್ಳಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಮಹಾಂತಯ್ಯನ ಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ನಮ್ಮೆಲ್ಲರ ನಡುವಿನ ಬೇಧ ದೂರವಾಗಿ, ನಾವೆಲ್ಲರೂ ಭಾರತೀಯರು ಎನ್ನುವ ಭಾವದ ಹೂವು ಅರಳಲಿ. ಒಂದೇ ತೋಟದ ಹೂವಿನಂತೆ ಸದ್ಭಾವನೆ ಮೂಡಿ ದ್ವೇಷದ ಗಾಳಿ ಬೀಸದಿರಲಿ.
ಅಬ್ದುಲ್‌ ಖಾದರ್‌ ಸಾಬ್‌, ಸಮಾಜದ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.