ADVERTISEMENT

ಕೊಪ್ಪಳ: ಅಂಗನವಾಡಿ ಕಾರ್ಯಕರ್ತೆಯರೇ ಸಹಾಯಕಿಯರು!

ಜಿಲ್ಲೆಯ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಹಾಯಕಿಯರ ಕೊರತೆ, ನಿತ್ಯದ ಕೆಲಸಕ್ಕೆ ಪರದಾಟ

ಪ್ರಮೋದ ಕುಲಕರ್ಣಿ
Published 11 ಜೂನ್ 2025, 5:24 IST
Last Updated 11 ಜೂನ್ 2025, 5:24 IST
   

ಕೊಪ್ಪಳ: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಪಾಲನೆ, ಪೋಷಣೆ, ಊಟ ಮಾಡಿಸುವುದು, ನಿರ್ವಹಣೆ ಹೀಗೆ ಅನೇಕ ಕೆಲಸಗಳನ್ನು ಮಾಡುವಲ್ಲಿ ಮಹತ್ದದ ಜವಾಬ್ದಾರಿ ನಿರ್ವಹಿಸುತ್ತಿರುವ ಸಹಾಯಕಿಯರ ನೇಮಕಾತಿ ಪ್ರಕ್ರಿಯೆ ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದಿರುವುದರಿಂದ ಸಹಾಯಕಿಯರ ಕೊರತೆಯಿರುವ ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಪರದಾಡುವಂತಾಗಿದೆ.   

ಜಿಲ್ಲೆಯಲ್ಲಿ ಒಟ್ಟು 1960 ಅಂಗನವಾಡಿ ಕೇಂದ್ರಗಳಿದ್ದು 1.31 ಲಕ್ಷ ಮಕ್ಕಳು ಪ್ರವೇಶ ಪಡೆದಿದ್ದಾರೆ. 28 ಸಾವಿರ ಗರ್ಭಿಣಿಯರಿಗೂ ಈ ಕೇಂದ್ರಗಳ ಮೂಲಕವೇ ಪೌಷ್ಠಿಕ ಆಹಾರ ನೀಡಲಾಗುತ್ತಿದೆ. ಪ್ರತಿ ಕೇಂದ್ರಗಳ ನಿರ್ವಹಣೆಗೆ ಒಬ್ಬ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ನೀಡಲಾಗಿದೆ. ಆದರೆ ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಸಹಾಯಕಿಯರ ನೇಮಕ ವಿಳಂಬವಾಗಿದೆ. ಇದು ಕಾರ್ಯಕರ್ತೆಯರನ್ನು ಸಂಕಷ್ಟಕ್ಕೆ ದೂಡಿದೆಯಲ್ಲದೇ, ಮೇಲಧಿಕಾರಿಗಳು ವಹಿಸುವ ಜವಾಬ್ದಾರಿ ಮತ್ತು ಕೇಂದ್ರಗಳ ನಿರ್ವಹಣೆ ಎರಡೂ ಸವಾಲುಗಳನ್ನು ನಿರ್ವಹಣೆ ಮಾಡುವುದು ಕಾರ್ಯಕರ್ತೆಯರಿಗೆ ಕಷ್ಟವಾಗುತ್ತಿದೆ.

ಕೊಪ್ಪಳ ತಾಲ್ಲೂಕಿನ ಕೇಂದ್ರಗಳಲ್ಲೇ 88 ಜನ ಸಹಾಯಕಿಯರ ಕೊರತೆ ಇದೆ. ಜಿಲ್ಲಾಕೇಂದ್ರದ ಅಂಗನವಾಡಿ ಕೇಂದ್ರದಲ್ಲಿಯೇ ಅಂಗವಿಕಲೆಯೊಬ್ಬರು ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ಕಾರ್ಯಕರ್ತೆಗೆ ಕಾಲು ಇಲ್ಲ. ಇಂಥ ಕೇಂದ್ರಗಳಲ್ಲಿ ಸಹಾಯಕಿಯರ ಅಗತ್ಯದ ವ್ಯಾಪಕವಾಗಿದೆ. ಈ ಬೇಡಿಕೆ ಈಡೇರಿಸುವಂತೆ ಕಾರ್ಯಕರ್ತೆಯರು ಅನೇಕ ಬಾರಿ ಮನವಿ ಸಲ್ಲಿಸಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಕಾರ್ಯಕರ್ತೆಯರು ದೂರು.

ADVERTISEMENT

ಅಂಗನವಾಡಿಗೆ ಬರುವ ಮಕ್ಕಳಿಗೆ ಆಹಾರ ತಯಾರಿಸುವುದು, ಕಾರ್ಯಕರ್ತೆಯರು ಸರ್ಕಾರದ ವಿವಿಧ ಕೆಲಸಗಳ ಅಂಗವಾಗಿ ಸರ್ವೆ ಕಾರ್ಯಕ್ಕೆ ಹೋದಾಗ, ರಿಜಿಸ್ಟಾರ್‌ ನಿರ್ವಹಣೆ ಸೇರಿದಂತೆ ಇತರೆ ಕೆಲಸಗಳಲ್ಲಿ ತೊಡಗಿದಾಗ ಸಹಾಯಕಿಯರೇ ಕೇಂದ್ರಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಆದ್ದರಿಂದ ನಮ್ಮ ಬೇಡಿಕೆಯನ್ನು ತುರ್ತಾಗಿ ಜಿಲ್ಲಾಡಳಿತ ಈಡೇರಿಸಬೇಕು ಎಂದು ಕಾರ್ಯಕರ್ತೆಯರು ಆಗ್ರಹಿಸಿದ್ದಾರೆ.

‘ಸಹಾಯಕಿಯರ ಕೊರತೆ ಇರುವ ಕೇಂದ್ರಗಳಿಗೆ ಅವರನ್ನು ನೇಮಕ ಮಾಡಬೇಕು ಎಂದು ಎರಡ್ಮೂರು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದರೂ ಪ್ರಯೋಜನವಾಗಿಲ್ಲ. ಈಗ ಮತ್ತೊಮ್ಮೆ ಹೋರಾಟ ಮಾಡುತ್ತೇವೆ. ಜಿಲ್ಲಾಡಳಿತ ನಮ್ಮ ಬೇಡಿಕೆಗ ಸ್ಪಂದಿಸದಿದ್ದರೆ ಕಾರ್ಯಕರ್ತೆಯರಷ್ಟೇ ಇರುವ ಕೇಂದ್ರಗಳಲ್ಲಿ ಮಕ್ಕಳಿಗೆ ಮನೆಗೆ ಅಹಾರವನ್ನು ಮನೆಗೆ ಕಳುಹಿಸುವುದು ಅನಿವಾರ್ಯವಾಗುತ್ತದೆ’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎ.ಐ.ಟಿ.ಯು.ಸಿ. ಸಂಯೋಜಿತ) ಜಿಲ್ಲಾ ಸಂಚಾಲಕಿ ಮುಮ್ತಾಜ್ ಬೇಗಂ ಕಂದಗಲ್ ಹೇಳಿದರು.

‘ಬಹಳಷ್ಟು ಕೇಂದ್ರಗಳಲ್ಲಿ ಕಾರ್ಯಕರ್ತೆಯರು ಅಂಗವಿಕಲರಾಗಿದ್ದು ಅವರಿಗೆ ಅವರನ್ನೇ ನಿರ್ವಹಣೆ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಬದುಕಿಗಾಗಿ ಅಂಗನವಾಡಿ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಅಂಥ ಕೇಂದ್ರಗಳಿಗೆ ಸಹಾಯಕಿಯರನ್ನು ನೇಮಕ ಮಾಡಿದರೆ ಬಹಳಷ್ಟು ಅನುಕೂಲವಾಗುತ್ತದೆ’ ಎಂದರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.