ADVERTISEMENT

ಕೊಪ್ಪಳ: ಅಂಜನಾದ್ರಿ ಸುತ್ತಮುತ್ತ ಹಸಿರು ಕಾರ್ಯ‍ಪಡೆಯ ತಂಡಗಳಿಂದ ಜಾಗೃತಿ

ಪ್ರಮೋದ ಕುಲಕರ್ಣಿ
Published 3 ಡಿಸೆಂಬರ್ 2025, 6:19 IST
Last Updated 3 ಡಿಸೆಂಬರ್ 2025, 6:19 IST
<div class="paragraphs"><p>ಅಂಜನಾದ್ರಿ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು ಕಾರ್ಯಪಡೆ ಸದಸ್ಯರು ಕೆಲಸದಲ್ಲಿ ತೊಡಗಿರುವುದು&nbsp;</p></div>

ಅಂಜನಾದ್ರಿ ಸುತ್ತಮುತ್ತಲಿನ ಪರಿಸರದಲ್ಲಿ ಹಸಿರು ಕಾರ್ಯಪಡೆ ಸದಸ್ಯರು ಕೆಲಸದಲ್ಲಿ ತೊಡಗಿರುವುದು 

   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಂದೆಡೆ ಮಾಲಾಧಾರಿಗಳ ಸಂಭ್ರಮ ಮನೆ ಮಾಡಿದ್ದರೆ ಇನ್ನೊಂದೆಡೆ ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಲು ಹಸಿರು ಕಾರ್ಯ‍ಪಡೆಯ ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದೆ.

ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಮಾಲಾಧಾರಿಗಳು ಪ್ಲಾಸ್ಟಿಕ್‌ ತ್ಯಾಜ್ಯ, ಬಟ್ಟೆ ಹಾಗೂ ಪೂಜಾ ಸಾಮಗ್ರಿಗಳಲ್ಲಿ ಸಮೀಪದಲ್ಲಿಯೇ ಹರಿಯುವ ತುಂಗಭದ್ರಾ ನದಿಯಲ್ಲಿ ಬೀಸಾಡುತ್ತಾರೆ. ಅವರಲ್ಲಿ ಜಾಗೃತಿ ಮೂಡಿಸಿ, ಒಂದು ವೇಳೆ ತ್ಯಾಜ್ಯ ಬೀಸಾಡಿದ್ದರೆ ಅದನ್ನು ಸ್ವಚ್ಛಗೊಳಿಸಿ ಜಲ ಹಾಗೂ ಪರಿಸರ ಮಾಲಿನ್ಯವಾಗದಂತೆ ತಡೆಯಲು ಜಿಲ್ಲಾಡಳಿತ ಪರಿಸರ ಉಳಿವಿಗೆ ಕೆಲಸ ಮಾಡುತ್ತಿರುವ ಸಂಘಗಳಿಗೆ ಜವಾಬ್ದಾರಿ ವಹಿಸಿದೆ.

ADVERTISEMENT

ಇದರಲ್ಲಿ ಗಂಗಾವತಿಯ ಕಿಷ್ಕಿಂಧಾ ಯುವಚಾರಣ ಬಳಗದ ಸದಸ್ಯರು ಅಂಜನಾದ್ರಿ ಸುತ್ತಮುತ್ತಲಿರುವ ಋಷ್ಯಮುಖ, ಚಿಂತಾಮಣಿ, ತಳವಾರಘಟ್ಟ, ಪಂಪಾಸರೋವರ, ಹನುಮನಹಳ್ಳಿ ಹೀಗೆ ಅನೇಕ ಸ್ಥಳಗಳಲ್ಲಿ ಜಾಗೃತಿ ಕೆಲಸಗಳನ್ನು ಮಾಡುತ್ತಿದೆ. ಮಾಲಾಧಾರಿಗಳು ಬಟ್ಟೆ ಬೀಸಾಡಿ ಹೋಗಿದ್ದರೆ, ಸ್ನಾನಕ್ಕೆ ಬಳಸಿದ ಶಾಂಪೊ, ಸೋಪು ಅಲ್ಲಿಯೇ ಉಳಿಸಿ ಹೋಗಿದ್ದರೆ ಅದನ್ನು ಚಾರಣ ಬಳಗದ ಹಸಿರು ಕಾರ್ಯಪಡೆಯ ಸದಸ್ಯರು ಸ್ವಚ್ಛಗೊಳಿಸುತ್ತಿದ್ದಾರೆ. ತ್ಯಾಜ್ಯವನ್ನು ಹಾಕಲು ಅಲ್ಲಲ್ಲಿ ದೊಡ್ಡ ಡ್ರಮ್‌ಗಳನ್ನು ಇರಿಸಲಾಗಿದೆ.

200 ಸದಸ್ಯರನ್ನು ಒಳಗೊಂಡಿರುವ ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ಜಿಲ್ಲೆಯಾದ್ಯಂತ ಐತಿಹಾಸಿಕ ತಾಣಗಳಲ್ಲಿ ಚಾರಣಗಳನ್ನು ನಡೆಸುವುದು, ಪರಿಸರ ಜಾಗೃತಿ ಮೂಡಿಸುವುದು, ಐತಿಹಾಸಿಕ ಸ್ಥಳಗಳಲ್ಲಿ ಸ್ವಚ್ಛಗೊಳಿಸುವುದು ಸೇರಿದಂತೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹಾಗೂ ಇತರ ಅಧಿಕಾರಿಗಳು ಪ್ರೋತ್ಸಾಹ ನೀಡಿದ್ದರಿಂದ ಈ ತಂಡದ ಸದಸ್ಯರು ಹನುಮಮಾಲೆ ವಿಸರ್ಜನೆ ಸಮಯದಲ್ಲಿ ಅಂಜನಾದ್ರಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಜವಾಬ್ದಾರಿ ಗಳಿಸಿಕೊಂಡಿದ್ದಾರೆ.

ನಮ್ಮ ಬಳಗ ಕಿಷ್ಕಿಂಧಾ ಪಾವಿತ್ರ್ಯತೆ ಪರಿಶುದ್ಧತೆ ಪ್ರಾಮುಖ್ಯತೆ ಕಾಪಾಡುವುದರಲ್ಲಿ ಸಕ್ರಿಯವಾಗಿದೆ. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಹನುಮ ಮಾಲಾಧಾರಿಗಳು ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು.
ಡಾ.ಅಮರೇಶ ಪಾಟೀಲ್ ಮಾರ್ಗದರ್ಶಕರು ಕಿಷ್ಕಿಂಧಾ ಯುವ ಚಾರಣ ಬಳಗ ಗಂಗಾವತಿ
ನಲವತ್ತು ಸದಸ್ಯರು ಹಸಿರು ಕಾರ್ಯಪಡೆ ಸದಸ್ಯರಾಗಿ ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಕಸ ನದಿ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದ್ದೇವೆ.
ಅರ್ಜುನ್ ಆರ್. ಚಾರಣ ಬಳಗದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.