
ಗಂಗಾವತಿ: ತಾಲ್ಲೂಕಿನ ಚಿಕ್ಕರಾಂಪುರ ಗ್ರಾಮ ಸಮೀಪದ ಅಂಜನಾದ್ರಿ ದೇವಸ್ಥಾನದಲ್ಲಿ ಆರತಿತಟ್ಟೆ ತೆರವುಗೊಳಿಸಿರುವುದನ್ನು ಖಂಡಿಸಿ, ರೈತ ಹಾಗೂ ದಲಿತ ಸಂಘಟನೆಗಳ ಮುಖಂಡರು ಭಾನುವಾರ ಅಂಜನಾದ್ರಿ ಬೆಟ್ಟದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘಟನೆ ಮುಖಂಡ ಶರಣಪ್ಪ ಮಾತನಾಡಿ, ‘ಅಂಜನಾದ್ರಿ ಬೆಟ್ಟ ಮುಜರಾಯಿ ಇಲಾಖೆ ಸೇರ್ಪಡೆಯಾಗಿದ್ದು, ಈವರೆಗೆ ಭಕ್ತರಿಗೆ ಯಾವ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸುತ್ತಿಲ್ಲ. ಕೇವಲ ದೇವಸ್ಥಾನದಿಂದ ಬರುವ ಆದಾಯಕ್ಕೆ ಮಾತ್ರ ಅಧಿಕಾರಿಗಳು ಹಾತೊರೆಯುತ್ತಿದ್ದಾರೆ. ಅಂಜನಾದ್ರಿಗೆ ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರಿಲ್ಲ. ಪ್ರಸಾದ ವ್ಯವಸ್ಥೆ ಅಷ್ಟಕಷ್ಟೇ. ದೇವಸ್ಥಾನದ ಪ್ರಧಾನ ಅರ್ಚಕರಿಗೆ ವ್ಯವಸ್ಥಿತವಾಗಿ ಪೂಜೆ ಮಾಡಲು ಬಿಡುತ್ತಿಲ್ಲ. ದೇವಸ್ಥಾನ ಪೂಜೆ ವಿಚಾರದಲ್ಲಿ ಅಧಿಕಾರಿಗಳು ಪದೇ, ಪದೇ ಅರ್ಚಕರಿಗೆ ಕಿರುಕುಳ ನೀಡುವುದೇ ಕೆಲಸವಾಗಿದೆ’ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ಆರತಿ ತಟ್ಟೆ ಹಿಡಿದು ಭಕ್ತರು ಹಾಕುವ ಕಾಣಿಕೆಯಿಂದ, ಭಕ್ತರಿಗೆ ಪ್ರಸಾದ, ಕುಡಿಯುವ ನೀರು ಸೇರಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದಾರೆ. ಇದಕ್ಕೆ ವಿರೋಧವಾಗಿ ಅಧಿಕಾರಿಗಳು ಆರತಿತಟ್ಟೆ ತೆರವುಗೊಳಿಸಿದ್ದಾರೆ. ಇದು ಖಂಡನೀಯ. ಅರ್ಚಕ ವಿದ್ಯಾದಾಸ ಬಾಬಾ ಅವರಿಗೆ ಪೂಜೆ ಅವಕಾಶದ ಜೊತೆಗೆ ಆರತಿ ತಟ್ಟೆ ಹಿಡಿಯಲು ಅವಕಾಶಕೊಡಬೇಕು’ ಎಂದು ಒತ್ತಾಯಿಸಿದರು.
ರೈತ ಸೇರಿ ದಲಿತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.