ಕೊಪ್ಪಳ: ಹನುಮ ಜನಿಸಿದ ನಾಡು ಎಂದೇ ಖ್ಯಾತಿಯಾದ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ದೇವಸ್ಥಾನ ಈಗ ಪೂಜಾ ವಿವಾದದಿಂದಾಗಿ ಚರ್ಚೆಯಾಗುತ್ತಿದ್ದು, ಇದು ಭಕ್ತರಲ್ಲಿ ಮುಜುಗರ ಉಂಟು ಮಾಡುತ್ತಿದೆ.
ದೇಶದ ಗಮನ ಸೆಳೆದಿರುವ ಈ ಕ್ಷೇತ್ರಕ್ಕೆ ಭಾರತದ ವಿವಿಧೆಡೆಯಿಂದ ಅದರಲ್ಲಿಯೂ ವಿಶೇಷವಾಗಿ ಉತ್ತರ ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ವಾರಾಂತ್ಯದ ದಿನಗಳಂದು ಭಕ್ತರ ಸಂಖ್ಯೆ ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿರುತ್ತದೆ. ಬೆಟ್ಟದ ಮೇಲಿರುವ ಈ ದೇವಸ್ಥಾನಕ್ಕೆ ಹನುಮನ ದರ್ಶನ ಪಡೆಯಲು ಬರುವವರು ಒಂದೆಡೆಯಾದರೆ, ಬೆಟ್ಟದ ಮೇಲಿನಿಂದ ಕಾಣುವ ಸುತ್ತಲಿನ ಮನಮೋಹಕ ಪರಿಸರ, ತುಂಗಭದ್ರಾ ನದಿ ಹರಿಯುವ ಮೋಹಕತೆಯನ್ನು ಕಣ್ತುಂಬಿಕೊಳ್ಳಲು ಬರುವವರೂ ಇದ್ದಾರೆ.
ಆದರೆ, ದೇವಸ್ಥಾನಕ್ಕೆ ಹೋಗುವವರಿಗೆ ಇತ್ತೀಚಿಗಿನ ದಿನಗಳಲ್ಲಿ ಮುಜುಗರ ಎದುರಾಗುತ್ತಿದೆ. ಹಲವು ವರ್ಷಗಳಿಂದ ಬೆಟ್ಟದಲ್ಲಿ ಅರ್ಚಕರಾಗಿ ವಿದ್ಯಾದಾಸ್ ಬಾಬಾ ಹನುಮನ ಪೂಜೆ ನೆರವೇರಿಸುತ್ತಿದ್ದಾರೆ. ಈ ದೇವಸ್ಥಾನ ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದ್ದು, ಪೂಜೆ ಯಾರು ಮಾಡಬೇಕು ಎನ್ನುವುದು ಇಲಾಖೆಯ ಅಧಿಕಾರಿಗಳು, ಬೇರೆ ದೇವಸ್ಥಾನಗಳ, ಅಂಜನಾದ್ರಿಯ ಹಿಂದಿನ ಅರ್ಚಕರು ಮತ್ತು ಬಾಬಾ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ.
ಹಲವು ವರ್ಷಗಳಿಂದ ತೆರೆಮರೆಯಲ್ಲಿ ಈ ಕುರಿತು ಅನೇಕ ಬಾರಿ ಜಟಾಪಟಿಗಳು ನಡೆಯುತ್ತಲೇ ಇವೆ. ಬೆಟ್ಟದ ಮೇಲಿನ ಹನುಮನ ಮೂರ್ತಿಯ ಪೂಜೆಯ ಹಕ್ಕು ನನಗೇ ಕೊಡಬೇಕು ಎಂದು ವಿದ್ಯಾದಾಸ್ ಬಾಬಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯ ಕೂಡ ಇದಕ್ಕೆ ಅನುಮತಿ ನೀಡಿದೆ. ಆದರೆ, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಗಣ್ಯ ಅಥವಾ ಅತಿಗಣ್ಯ ವ್ಯಕ್ತಿಗಳು ಬಂದರೆ ಬೆಟ್ಟದ ನೆರೆಯ ದೇವಸ್ಥಾನಗಳ ಅರ್ಚಕರನ್ನು ಜೊತೆಗೆ ಕರೆದುಕೊಂಡು ಬಂದು ಪೂಜೆ ಮಾಡಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಮಾಡಿದ್ದರೂ ಇನ್ನೊಬ್ಬ ಅರ್ಚಕರಿಗೆ ಯಾಕೆ ಅವಕಾಶ ಕೊಡುತ್ತೀರಿ ಎನ್ನುವುದು ವಿದ್ಯಾದಾಸ್ ಬಾಬಾ ಅವರ ಪ್ರಶ್ನೆ.
ದೇವಸ್ಥಾನ ಧಾರ್ಮಿಕ ದತ್ತಿ ಇಲಾಖೆಯಡಿ ಇರುವ ಕಾರಣ ದೇವಸ್ಥಾನಕ್ಕೆ ಸಂದಾಯವಾಗುವ ಹಣ ಸರ್ಕಾರದ ಹುಂಡಿಗೆ ಸೇರಬೇಕು ಎನ್ನುವುದು ಅಧಿಕಾರಿಗಳ ವಾದ. ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದಾಗ ಭಕ್ತರು ಅರತಿ ತಟ್ಟೆಯಲ್ಲಿ ಹಾಕುವ ಹಣ ವಿದ್ಯಾದಾಸ್ ಬಾಬಾ ತೆಗೆದುಕೊಳ್ಳುವುದಕ್ಕೂ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
‘ಎಲ್ಲಿಂದಲೊ ಬಂದಿರುವ ಬಾಬಾಗೆ ಗುರು ಪರಂಪರೆಯ ಇತಿಹಾಸವೇ ಇಲ್ಲ; ಅಂಥವರಿಗೆ ಯಾಕೆ ಪೂಜೆಗೆ ಅವಕಾಶ ಕೊಡಬೇಕು’ ಎಂದು ಅಂಜನಾದ್ರಿಗೆ ಸಮೀಪದಲ್ಲಿಯೇ ಇರುವ ಪಂಪಾಸರೋವರದ ಜಯಲಕ್ಷ್ಮೀ ದೇವಸ್ಥಾನದ ಅರ್ಚಕ ಆನಂದದಾಸ್ ಹಾಗೂ ಅಂಜನಾದ್ರಿ ದೇವಸ್ಥಾನದ ಹಿಂದಿನ ಅರ್ಚಕ ಪಂಕಜದಾಸ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ಇರುವ ಈ ಆಂತರಿಕ ತಿಕ್ಕಾಟ ಹಲವು ತಿಂಗಳುಗಳಿಂದ ಸಾರ್ವಜನಿಕರು, ಗಣ್ಯರು ಹಾಗೂ ಅತಿಗಣ್ಯರ ಮುಂದೆಯೂ ಬಹಿರಂಗವಾಗುತ್ತಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.
ನಯಾಪೈಸೆಯೂ ಬೇಕಾಗಿಲ್ಲ: ಬಾಬಾ
‘ಅಂಜನಾದ್ರಿ ಬೆಟ್ಟಕ್ಕೆ ಈಗ ಭಕ್ತರಿಂದಲೇ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಮೊದಲು ಏನೂ ಇರಲಿಲ್ಲ. ಆಗಿನಿಂದಲೂ ಪೂಜೆ ಮಾಡಿಕೊಂಡು ಬಂದಿದ್ದೇನೆ. ಮಂಗಳಾರತಿಯ ಹಣ ಪಡೆದರೂ ಅದಕ್ಕಿಂತಲೂ ಹೆಚ್ಚು ಹಣವನ್ನು ದೇವರಿಗಾಗಿಯೇ ಖರ್ಚು ಮಾಡುತ್ತೇನೆ. ದೇವಸ್ಥಾನದ ನಯಾಪೈಸೆಯೂ ಬೇಕಿಲ್ಲ’ ಎಂದು ವಿದ್ಯಾದಾಸ್ ಬಾಬಾ ಹೇಳಿದರು.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಅಂಜನಾದ್ರಿ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ನೀಡಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಅದು ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ. ಆದರೆ ಅಭಿವೃದ್ಧಿ ಆಗಿಲ್ಲ. ಸಂಸ್ಕೃತ ಪಾಠಶಾಲೆ ನಾನೇ ಕಟ್ಟಿದ್ದೇನೆ’ ಎಂದರು.
ಪೂಜೆಗೆ ಅಡ್ಡಿಪಡಿಸಿಲ್ಲ: ಸುರೇಶ ಇಟ್ನಾಳ
‘ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಪ್ರಕಾರ ವಿದ್ಯಾದಾಸ್ ಬಾಬಾಗೆ ಪೂಜೆ ಮಾಡಲು ಅವಕಾಶ ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು ಅವರೇ ಪೂಜೆ ಮಾಡುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ ಹೇಳಿದರು.
‘ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದಲ್ಲಿ ಅತಿಗಣ್ಯ ವ್ಯಕ್ತಿಗಳು ಬಂದಾಗ ಬಾಬಾಗೆ ಮಾತ್ರ ಪೂಜೆಗೆ ಅವಕಾಶ ಕೊಡಬೇಕು ಎಂದೇನೂ ಹೇಳಿಲ್ಲ. ಬೇರೆಯವರು ಪೂಜೆ ಮಾಡಬಾರದು ಎಂತಲೂ ತಿಳಿಸಿಲ್ಲ. ನಾನೊಬ್ಬನೇ ಪೂಜೆ ಮಾಡಬೇಕು ಎನ್ನುವುದು ಅವರ ವಾದ. ನಾನು ಅಂಜನಾದ್ರಿಗೆ ಭೇಟಿ ನೀಡಿದಾಗ ಪೂಜೆ ಮಾಡುವುದನ್ನು ಬಿಟ್ಟು ವಿಡಿಯೊ ಮಾಡುತ್ತಿದ್ದ. ಆಗ ನೀವೇ ಪೂಜೆ ಮಾಡಿ ಎಂದು ಹೇಳಿದ್ದಕ್ಕೆ ನಾನು ಮಾಡುವುದಿಲ್ಲ ಎಂದಿದ್ದಾರೆ’ ಎಂದರು.
ನ್ಯಾಯಾಲಯದ ಅಂತಿಮ ತೀರ್ಪಿನ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಹನುಮ ಜನಿಸಿದ ನಾಡು ಎನ್ನುವ ಕಾರಣಕ್ಕೆ ಭಕ್ತಿಯಿಂದ ಅಂಜನಾದ್ರಿಗೆ ಬರುತ್ತೇನೆ. ಪೂಜೆ ಸಲ್ಲಿಸುವ ವಿಚಾರದಲ್ಲಿ ದೊಡ್ಡವರೇ ಜಗಳವಾಡಿದರೆ ಮುಜುಗರವಾಗುತ್ತದೆ. ಆದಷ್ಟು ಬೇಗನೆ ಇತ್ಯರ್ಥಪಡಿಸಬೇಕುವಸಂತ ದೇಶಪಾಂಡೆ, ಹುಬ್ಬಳ್ಳಿಯಿಂದ ಬಂದಿದ್ದ ಭಕ್ತ
ಅಂಜನಾದ್ರಿ ಪೂಜಾ ವಿವಾದ ಗಮನಕ್ಕಿದೆ. ಇದೇ 16ರಂದು ಬೆಟ್ಟದಲ್ಲಿಯೇ ಸಭೆ ನಡೆಸಿ ಪರಿಹರಿಸುವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿದ್ಯಾದಾಸ್ ಬಾಬಾಗೆ ಪೂಜೆಗೆ ಅವಕಾಶ ಕೊಡಬೇಕು.ಜನಾರ್ದನ ರೆಡ್ಡಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.