ADVERTISEMENT

ಆನೆಗೊಂದಿ ಉತ್ಸವಕ್ಕೆ ಸ್ಟಾರ್ ನಟರಿಗೆ ಆಹ್ವಾನ

ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ; ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವ ಭಾಗಿ; ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 10:31 IST
Last Updated 4 ಡಿಸೆಂಬರ್ 2019, 10:31 IST
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಜ.9,10ರಂದು ನಡೆಯಲಿರುವ ಆನೆಗೊಂದಿ ಉತ್ಸವದ ಲೋಗೊ ಬಿಡುಗಡೆ ಮಾಡಲಾಯಿತು
ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಜ.9,10ರಂದು ನಡೆಯಲಿರುವ ಆನೆಗೊಂದಿ ಉತ್ಸವದ ಲೋಗೊ ಬಿಡುಗಡೆ ಮಾಡಲಾಯಿತು   

ಗಂಗಾವತಿ: ಐತಿಹಾಸಿಕ ಗತವೈಭವವನ್ನು ಮರು ಕಳುಹಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವ ವನ್ನು ಆಚರಣೆ ಮಾಡಲು ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಸ್ಥಳೀಯ ಕಲಾ ವಿದರ ಜತೆಗೆ ಸ್ಟಾರ್ ನಟರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸಿ.ಡಿ.ಗೀತಾ ಹೇಳಿದರು.

ತಾಲ್ಲೂಕಿನ ಆನೆಗೊಂದಿ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಪೂರ್ವಭಾವಿ ಸಭೆ ಹಾಗೂ ಉತ್ಸವದ ಲೋಗೊ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ಸವಕ್ಕೆ ಸ್ಥಳೀಯರಿಗೆ ಆದ್ಯತೆಯನ್ನು ನೀಡುವ ಉದ್ದೇಶದಿಂದ ಸ್ಥಳೀಯ ಕಲಾವಿದರಿಗೆ ಅರ್ಜಿಯನ್ನು ಕರೆಯಲಾಗಿತ್ತು. ಈಗಾಗಲೇ 150 ಅರ್ಜಿಗಳು ಬಂದಿವೆ. ಇವುಗಳಲ್ಲಿ ನುರಿತ ಕಲಾವಿದರಿಂದ ಆಯ್ಕೆಯನ್ನು ಮಾಡಲಾಗುವುದು.

ADVERTISEMENT

ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೆರಗು ಹೆಚ್ಚಿಸಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಖ್ಯಾತ ಹಾಡುಗಾರ ವಿಜಯ ಪ್ರಕಾಶ್ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಚಲನಚಿತ್ರ ನಟರಾದ ಯಶ್, ದರ್ಶನ್, ಸುದೀಪ್ ಈ ಮೂರಲ್ಲಿ ಒಬ್ಬರನ್ನು ಕರೆಸುವ ಪ್ರಯತ್ನವನ್ನು ಮಾಡಲಾಗುವುದು. ಇನ್ನೂ ಉತ್ಸವದಲ್ಲಿ ಎರಡು ವೇದಿಕೆಗಳನ್ನು ಹಾಕಲು ನಿರ್ಧರಿಸಿದ್ದು, ಮುಖ್ಯ ವೇದಿಕೆಗೆ ಕೃಷ್ಣದೇವರಾಯ, ಎರಡನೇ ವೇದಿಕೆಗೆ ವಿದ್ಯಾರಣ್ಯ ವೇದಿಕೆ ಎಂದು ನಾಮಕರಣ ಮಾಡಲಾಗುವುದು. ದೇಶಿಯ ಹಾಗೂ ಮನರಂಜನೆ ಕ್ರೀಡೆಗಳಿಗೆ ಪ್ರಮುಖ ಆದ್ಯತೆಯನ್ನು ನೀಡಲಾಗಿದೆ ಎಂದು ಹೇಳಿದರು.

ನಂತರ ಶಾಸಕ ಪರಣ್ಣ ಮುನವಳ್ಳಿ ಆನೆಗೊಂದಿ ಉತ್ಸವದ ಲೋಗೊ ಬಿಡುಗಡೆ ಮಾಡಿದರು.

ಮನೆಗಳ ಸಿಂಗಾರಕ್ಕೆ ಬಹುಮಾನ : ಉತ್ಸವ ಅದ್ದೂರಿ ಆಚರಣೆಯ ಜತೆಗೆ ಪರಂಪರೆಯನ್ನು ಕಾಪಾಡುವುದು ಕೂಡ ನಮ್ಮ ಹೊಣೆಯಾಗಿದೆ. ಹಾಗಾಗಿ ಉತ್ಸವದ ಎರಡು ದಿನಗ ಳಲ್ಲಿ ಆನೆಗೊಂದಿ ಗ್ರಾಮದಲ್ಲಿನ ಮನೆಗಳನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಿ, ನಮ್ಮ ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಸಿಂಗಾರ ಮಾಡುವ ಸ್ಪರ್ಧೆಯನ್ನು ನಡೆಸಲಾಗುವುದು. ಸಾಂಸ್ಕೃತಿಕವಾಗಿ ಮನೆಯನ್ನು ಸಿಂಗಾರಗೊಳಿಸಿದ ಮನೆಯನ್ನು ಗುರುತಿಸಿ, ಸೂಕ್ತ ರೀತಿಯಲ್ಲಿ ಬಹುಮಾನವನ್ನು ನೀಡಿ, ಪ್ರೋತ್ಸಾಹಿಸಲಾಗುವುದು ಎಂದರು.

ತಹಶೀಲ್ದಾರ್‌ ಎಲ್.ಡಿ.ಚಂದ್ರಕಾಂತ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್, ಸಿಡಿಪಿಒ ಗಂಗಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿ ಶರಣಪ್ಪ, ಕಂದಾಯ ನಿರೀಕ್ಷ ಮಂಜುನಾಥ ಹಿರೇಮಠ, ಆನೆಗೊಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜನಾ ದೇವಿ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಬಸವರಾಜ, ಕೃಷ್ಣಪ್ಪ, ಸ್ಥಳೀಯರಾದ ಹರಿಹರದೇವರಾಯ, ಅಂಬಿಗೇರ ಅಂಜಿನಪ್ಪ, ಶಮಾ ಪವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.