ADVERTISEMENT

ಅಳವಂಡಿ:‌ ಇದ್ದೂ ಇಲ್ಲದಂತಾದ ಎಪಿಎಂಸಿ ಉಪಮಾರುಕಟ್ಟೆ

ಜುನಸಾಬ ವಡ್ಡಟ್ಟಿ
Published 17 ನವೆಂಬರ್ 2025, 6:28 IST
Last Updated 17 ನವೆಂಬರ್ 2025, 6:28 IST
ಅಳವಂಡಿಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿರುವ ರಸ್ತೆಯ ದುಸ್ಥಿತಿ
ಅಳವಂಡಿಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿರುವ ರಸ್ತೆಯ ದುಸ್ಥಿತಿ   

ಅಳವಂಡಿ:‌ ಜಿಲ್ಲೆಯಲ್ಲಿ ದೊಡ್ಡ ಹೋಬಳಿ ಕೇಂದ್ರವಾದ ಅಳವಂಡಿಯಲ್ಲಿ ಹಲವು ವರ್ಷಗಳ ಹಿಂದೆಯೇ ಸ್ಥಾಪನೆಯಾದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ (ಎಪಿಎಂಸಿ ಉಪ ಮಾರುಕಟ್ಟೆ) ಇದ್ದೂ ಇಲ್ಲದಂತಾಗಿದೆ.

ಅಳವಂಡಿ ಗ್ರಾಮದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ಇದ್ದರೂ ಕೂಡ ಇಲ್ಲಿಯವರೆಗೂ ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. ಇದು ಸುಮಾರು 4 ಎಕರೆ ಪ್ರದೇಶವನ್ನು ಹೊಂದಿದೆ. ಎರಡು ಗೋದಾಮು ಹಾಗೂ ದವಸ ಧ್ಯಾನ ಹರವಲು ಒಂದು ಕಟ್ಟೆ ನಿರ್ಮಾಣ ಮಾಡಿದ್ದಾರೆ. ಉಳಿದ ಜಾಗವು ಸಂಪೂರ್ಣ ಮುಳ್ಳಿನ ಕಂಟಿಗಳಿಂದ ಕೂಡಿದೆ. ವರ್ತಕರಿಗೆ ನಿವೇಶನ ಹಂಚಿಕೆ, ಮಳಿಗೆಗಳ ನಿರ್ಮಾಣ, ಮೂಲಸೌಕರ್ಯ, ಅಭಿವೃದ್ಧಿ ಹಾಗೂ ಸಿಬ್ಬಂದಿ ನಿಯೋಜನೆ ಸೇರಿದಂತೆ ಹಲವು ಕಾರ್ಯಗಳು ಕುಂಠಿತಗೊಂಡಿರುವುದರಿಂದ ಎಪಿಎಂಸಿ ಬಯಲು ಶೌಚದ ತಾಣವಾಗಿ ಮಾರ್ಪಟ್ಟಿದೆ.

ಹೋಬಳಿ ವಿವಿಧ ಗ್ರಾಮಗಳ ರೈತರು ತಾವು ಬೆಳೆದ ಪ್ರತಿ ಉತ್ಪನ್ನಗಳನ್ನು ಮಾರಾಟ ಮಾಡಲು ದೂರದ ಕೊಪ್ಪಳ, ಗದಗ, ಮುಂಡರಗಿ ಸೇರಿದಂತೆ ಅನೇಕ ಪಟ್ಟಣಗಳಿಗೆ ಹೋಗುವ ಅನಿವಾರ್ಯತೆ ರೈತರಿಗೆ ಎದುರಾಗಿದ್ದು, ಇದರಿಂದ ರೈತರು, ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗಿದೆ.

ADVERTISEMENT

ಎಪಿಎಂಸಿಯಲ್ಲಿ ಮುಳ್ಳಿನ ಕಂಟಿಗಳ ಬೆಳೆದು ನಿಂತಿವೆ. ಅದೇ ಮುಳ್ಳಿನ ಕಂಟಿಗಳು ಮರೆಯಲ್ಲಿ ಜನರು ಶೌಚಕ್ಕೆ ಹೋಗುತ್ತಿದ್ದಾರೆ. ಇದರಿಂದ ದುರ್ನಾತ, ಸೊಳ್ಳೆ ಉತ್ಪತ್ತಿ ಜಾಸ್ತಿಯಾಗಿದೆ. ಹಗಲು ಹಾಗೂ ರಾತ್ರಿ ವೇಳೆಯಲ್ಲಿ ಕುಡುಕರ ಹಾವಳಿ ಕೂಡ ಹೆಚ್ಚಾಗಿದೆ. ರಾತ್ರಿಯಂತೂ ಹೇಳತೀರದು. ಎಪಿಎಂಸಿ ಬಯಲು ಜಾಗದಲ್ಲಿ ಬಿಸಾಕಿದ ಕಾಲಿ ಬಾಟಲ್‌ಗಳು ಮತ್ತು ಪ್ಲಾಸ್ಟಿಕ್ ಪೌಚಗಳು ಇವೆ.

ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತವಾದ ಮಾರುಕಟ್ಟೆ ಇಲ್ಲದಂತಾಗಿದೆ. ಹಾಗಾಗಿ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂಬುದು ಹೋಬಳಿ ರೈತರ ಒತ್ತಾಯವಾಗಿದೆ. ಎಪಿಎಂಸಿ ಆರಂಭವಾದರೆ ಇಲ್ಲಿನ ಹೋಬಳಿ ರೈತರಿಗೆ ಅನುಕೂಲವಾಗಲಿದೆ. ಆದರೆ ಎಪಿಎಂಸಿ ಇದೆಯೋ ಎಂಬ ಮಾಹಿತಿ ಕೂಡ ಇಲ್ಲಿನ ರೈತ ಸಮುದಾಯಕ್ಕೆ ಇಲ್ಲದಂತಾಗಿದೆ. ಇದನ್ನು ನಿವಾರಿಸಲು ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕಿದೆ ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

ರೈತರ ಬಗ್ಗೆ ಕಾಳಜಿ ವಹಿಸಿ, ಎಪಿಎಂಸಿ ಸಂಪೂರ್ಣ ಅಭಿವೃದ್ಧಿ ಹಾಗೂ ವ್ಯಾಪಾರ ವಹಿವಾಟಿಗೆ ಬೇಕಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

ಕಾಲೇಜು ಮೈದಾನವೇ ರೈತರಿಗೆ ಆಸರೆ: ‘ರೈತರು ತಾವು ಬೆಳೆದ ಬೆಳೆಗಳನ್ನು ಒಣಗಿಸಲು ಸೂಕ್ತವಾದ ಜಾಗ ಇಲ್ಲದೇ ಇಲ್ಲಿನ ಎಸ್ಎಸ್‌ಪಿಯು ಕಾಲೇಜಿನ ಮೈದಾನವನ್ನು ಉಪಯೋಗಿಸುತ್ತಿದ್ದಾರೆ. ಇದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಟೋಟ ಆಡಲು ತೊಂದರೆಯಾಗಿದೆ. ಹಾಗಾಗಿ ಎಪಿಎಂಸಿ ಆವರಣವನ್ನು ಸ್ವಚ್ಚತೆ ಮಾಡಿದರೆ ರೈತರಿಗೆ ದವಸ ಧಾನ್ಯ ಒಣಗಿಸಲು ಆಸರೆಯಾಗಲಿದೆ’ ಎನ್ನುತ್ತಾರೆ ಇಲ್ಲಿನ ರೈತರು.

ಅಳವಂಡಿಯ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿ ನಿರ್ಮಿಸಿದ ಗೋದಾಮು
ಎಪಿಎಂಸಿ ಜಾಗದಲ್ಲಿ ಕಸ ಕಡ್ಡಿ ಬೆಳೆದಿರುವುದು

‘ಬಯಲು ಜಾಗ ಸ್ವಚ್ಚತೆಗೆ ಆದ್ಯತೆ’

‘ಮಳಿಗೆ ನಿರ್ಮಾಣ ಮಾಡಲು ನಿವೇಶನ ಖರೀದಿ ಮಾಡಲು ವರ್ತಕರು ಮುಂದೆ ಬರುತ್ತಿಲ್ಲ. ಇದರಿಂದ ಮಾರುಕಟ್ಟೆ ವ್ಯಾಪಾರ ವಹಿವಾಟು ಪ್ರಾರಂಭವಾಗಿಲ್ಲ. ವರ್ತಕರು ನಿವೇಶನ ಖರೀದಿ ಮಾಡಲು ಮುಂದೆ ಬಂದು ಮಳಿಗೆ ನಿರ್ಮಿಸಿದರೇ ಮಾರುಕಟ್ಟೆ ಪ್ರಾರಂಭವಾಗುತ್ತದೆ. ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ ಹಾಗಾಗಿ ಸಿಬ್ಬಂದಿ ನಿಯೋಜನೆ ಕಾರ್ಯ ಕಷ್ಟ. ಕೂಡಲೇ ಎಪಿಎಂಸಿ ಬಯಲು ಜಾಗವನ್ನು ಸ್ವಚ್ಚತೆ ಮಾಡಿಸಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಎಪಿಎಂಸಿ ಆರಂಭವಾದರೆ ಇಲ್ಲಿನ ರೈತರಿಗೆ ಬೆಳೆದ ಬೆಳೆ ಮಾರಾಟ ಮಾಡಲು ಸಹಾಯಕವಾಗಲಿದೆ. ಎಪಿಎಂಸಿಗೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳು ಮುಂದಾಗಬೇಕು
–ಹನುಮಂತಪ್ಪ ಸಾಹುಕಾರ, ಮೋರನಾಳ ರೈತ
ಎಪಿಎಂಸಿ ಬಯಲು ಜಾಗದಲ್ಲಿ ಸಂಪೂರ್ಣ ಮುಳ್ಳಿನ ಕಂಟಿಗಳು ಬೆಳೆದಿವೆ. ಬಯಲು ಜಾಗ ಸ್ವಚ್ಚತೆ ಮಾಡಿದರೆ ರೈತರು ದವಸ ಧಾನ್ಯ ಒಣಗಿಸಲು ಮೈದಾನ ಉಪಯೋಗಿಸುತ್ತಾರೆ.
–ಗವಿಸಿದ್ದಪ್ಪ ಗದ್ದಿಕೇರಿ, ಅಳವಂಡಿ ರೈತ
ಹೋಬಳಿ ಕೇಂದ್ರದ ಎಪಿಎಂಸಿ ಉಪ ಮಾರುಕಟ್ಟೆ ಪ್ರಾರಂಭವಾದರೆ ಅಲೆದಾಟ ತಪ್ಪಲಿದೆ. ಇನ್ನಾದರೂ ಎಪಿಎಂಸಿ ಅಭಿವೃದ್ಧಿಗೆ ಮುಂದಾಗಬೇಕು
–ಬಸವರಾಜ ಹಳ್ಳಿ, ಹಲವಾಗಲಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.