ADVERTISEMENT

ಕೊಪ್ಪಳ | ಜಾಮೀನಿಗಾಗಿ ನಗದು ಖಾತರಿ ಸೌಲಭ್ಯಕ್ಕೆ ಕ್ರಮ ವಹಿಸಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2024, 16:15 IST
Last Updated 23 ಜುಲೈ 2024, 16:15 IST
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಎಂಪವರ್ಡ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್‌ ಅತುಲ್ ಮಾತನಾಡಿದರು
ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಎಂಪವರ್ಡ್ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್‌ ಅತುಲ್ ಮಾತನಾಡಿದರು   

ಕೊಪ್ಪಳ: ‘ಜಿಲ್ಲೆಯ ಕಾರಾಗೃಹದಲ್ಲಿರುವ ಬಂದಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ, ಜಾಮೀನಿಗೆ ನಗದು ಖಾತರಿ ನೀಡದ ಸ್ಥಿತಿಯಲ್ಲಿರುವ ಕಾರಾಗೃಹ ವಿಚಾರಣಾ ಬಂದಿಗಳು ಹಾಗೂ ಶಿಕ್ಷಾ ಬಂಧಿಗಳಿಗೆ ಜಾಮೀನಿಗಾಗಿ ನಗದು ಖಾತರಿ ಒದಗಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಹೇಳಿದರು.

ಇತ್ತೀಚಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಂಪವರ್ಡ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ‘ರಾಜ್ಯ ಸರ್ಕಾರದ ನಡುವಳಿಗಳ ಪತ್ರದಲ್ಲಿ ಕೇಂದ್ರ ಗೃಹ ಮಂತ್ರಾಲಯ ನೀಡಿರುವ ನಿರ್ದೇಶನದನ್ವಯ ಕಾರಾಗೃಹಗಳಲ್ಲಿ ದಾಖಲಿರುವ ವಿಚಾರಣಾ ಬಂದಿಗಳು ಮತ್ತು ಶಿಕ್ಷಾ ಬಂದಿಗಳಿಗೆ ನ್ಯಾಯಾಲಯದ ಆದೇಶದಂತೆ ಶಿಕ್ಷಾ ಅವಧಿ ಪೂರೈಸಿ ದಂಡದ ಮೊತ್ತ ಪಾವತಿಸದೇ ಇರುವ ಮತ್ತು ಜಾಮೀನು ಬಿಡುಗಡೆಗೆ ನಗದು ಖಾತರಿ ಪಾವತಿಸದೇ ಇರುವ ಬಂಧಿಗಳ ಬಿಡುಗಡೆಗೆ ಅನುಕೂಲ ಕಲ್ಪಿಸಲಾಗಿದೆ’ ಎಂದರು.

’ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರೂಪಿಸಿರುವ ಮಾರ್ಗಸೂಚಿ ಹಾಗೂ ಎಸ್‌ಒಪಿ ಅನ್ವಯ ಎಂಪವರ್ಡ್ ಕಮಿಟಿ ಹಾಗೂ ಓವರ್‌ಸೈಟ್ ಕಮಿಟಿ ರಚಿಸಲಾಗಿದ್ದು, ಸಮಿತಿ ರಚನೆಯ ಉದ್ದೇಶಗಳಂತೆ ಆರ್ಥಿಕವಾಗಿ ದುರ್ಬಲವಾಗಿರುವ ಕಾರಾಗೃಹ ಬಂಧಿಗಳಿಗೆ ಜಾಮೀನಿಗಾಗಿ ಆರ್ಥಿಕ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕು’ ಎಂದರು. 

ADVERTISEMENT

ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ ಚೌಹಾಣ್ ಮಾತನಾಡಿ ‘ಸಮಿತಿಯ ಆರ್ಥಿಕ ಸೌಲಭ್ಯ ಪಡೆಯಲು ಬಂದಿಗಳು ಆರ್ಥಿಕವಾಗಿ ದುರ್ಬಲವಾಗಿರಬೇಕು. ಪುನರಾವರ್ತಿತ ಅಪರಾಧಿಯಾಗಿರಬಾರದು. ಸ್ವಂತ ಆಸ್ತಿ ಹೊಂದಿರಬಾರದು ಎನ್ನುವ ನಿಯಮಗಳು ಇವೆ’ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಲಕಾರಿ ರಾಮಪ್ಪ ಒಡೆಯರ್, ಮಹಾಂತೇಶ ಸಂಗಪ್ಪ ದರ್ಗದ್, ಹೆಚ್ಚುವರಿ ಎಸ್‌.ಪಿ. ಹೇಮಂತ್‌ಕುಮಾರ್, ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.