ADVERTISEMENT

ಗಂಗಾವತಿ: 25ರಂದು ಆರ್ಯ ಈಡಿಗ ಸಮಾಜದ ಧಾರ್ಮಿಕ ಸಭೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 11:32 IST
Last Updated 23 ಜುಲೈ 2021, 11:32 IST
ಗಂಗಾವತಿ ಎಚ್.ಆರ್.ಶ್ರೀನಾಥ ಅವರ ಮನೆಯ ಆವರಣದಲ್ಲಿ ನಡೆದ ಈಡಿಗ ಸಮಾಜದ ಸುದ್ದಿಗೋಷ್ಠಿಯಲ್ಲಿ ಎಸ್‌ಎನ್‌ಜಿವಿ ಕಾರ್ಯಾಧ್ಯಕ್ಷ ನಾಗರಾಜ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎ.ಈ.ಸೂರಿಬಾಬು, ಭರತ್ ಇದ್ದರು
ಗಂಗಾವತಿ ಎಚ್.ಆರ್.ಶ್ರೀನಾಥ ಅವರ ಮನೆಯ ಆವರಣದಲ್ಲಿ ನಡೆದ ಈಡಿಗ ಸಮಾಜದ ಸುದ್ದಿಗೋಷ್ಠಿಯಲ್ಲಿ ಎಸ್‌ಎನ್‌ಜಿವಿ ಕಾರ್ಯಾಧ್ಯಕ್ಷ ನಾಗರಾಜ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎ.ಈ.ಸೂರಿಬಾಬು, ಭರತ್ ಇದ್ದರು   

ಗಂಗಾವತಿ: ‘ತಾಲ್ಲೂಕಿನ ಹೇಮಗುಡ್ಡ ಗ್ರಾಮದ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಜುಲೈ 25 ರಂದು ಆರ್ಯ ಈಡಿಗ ಸಮಾಜದ ಧಾರ್ಮಿಕ (ಚಿಂತನ- ಮಂಥನ ಚರ್ಚೆ) ಸಭೆ ಆಯೋಜಿಸಲಾಗಿದೆ‘ ಎಂದು ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಎ.ಈ.ಸೂರಿಬಾಬು ತಿಳಿಸಿದ್ದಾರೆ.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ಮನೆಯ ಆವರಣದಲ್ಲಿ ಶುಕ್ರವಾರ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ‘ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸುವರು. ಈಡಿಗ ಸಮಾಜದ ಬ್ರಹ್ಮಾನಂದ ಸ್ವಾಮೀಜಿ, ವಿಖ್ಯಾತಾನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಪ್ರಣವಾನಂದ ಸ್ವಾಮೀಜಿ, ಅರುಣಾನಂದ ಸ್ವಾಮೀಜಿ, ಸತ್ಯಾನಂದ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು.

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ರಾಜ್ಯಧ್ಯಾಕ್ಷ ತಿಮ್ಮೇಗೌಡ, ಬಿ.ಕೆ.ಹರಿಪ್ರಸಾದ್, ಹರತಾಳ ಹಾಲಪ್ಪ, ಮಧು ಬಂಗಾರಪ್ಪ, ಎಚ್.ಆರ್.ಗವಿಯಪ್ಪ, ಬೇಳೂರು ಗೋಪಾಲಕೃಷ್ಣ, ಸತ್ಯಜಿತ್ ಸುರತ್ಕಳ್, ಜೆ.ಪಿ.ಸುಧಾಕರ್, ರಾಜಶೇಖರ ಕೋಟ್ಯಾನ್, ಸುಭಾಷ ಗುತ್ತೇದಾರ ಅವರು ಭಾಗವಹಿಸುವರು.

ADVERTISEMENT

‘ಎಚ್‌.ಆರ್‌.ಶ್ರೀನಾಥ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಅವರ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ರಾಜ್ಯದ ಎಲ್ಲ ಈಡಿಗ ಆರ್ಯ ಸಮಾಜದ ಮುಖಂಡರು, ಪಾದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬೇಕು‘ ಎಂದು ಜಿಲ್ಲಾ ಈಡಿಗ ಸಮಾಜದ ಅಧ್ಯಕ್ಷರು ಮನವಿ ಮಾಡಿದ್ದಾರೆ.

ಸಮಾಜದ ಯುವ ಮುಖಂಡ ಭರತ್, ಎಸ್.ಎನ್.ಜಿ.ವಿ ಕಾರ್ಯಾಧ್ಯಕ್ಷ ನಾಗರಾಜ ಇದ್ದರು.

‘ಈಡಿಗ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಿ’
‘ರಾಜ್ಯದಲ್ಲಿ ಆರ್ಯ ಈಡಿಗ ಸಮಾಜವು ಸರ್ಕಾರದ ಮೂಲ ಸೌಲಭ್ಯ ಪಡೆಯುವಲ್ಲಿ ವಂಚಿತವಾಗಿದೆ. ಈಡಿಗ ಸಮಾಜಕ್ಕೆ ಜೀವನಾಧಾರವಾಗಿದ್ದ ಈಚಲು ವನವನ್ನು ಸರ್ಕಾರ ಕಿತ್ತುಕೊಂಡು ಆ ಪ್ರದೇಶವನ್ನು ಕೈಗಾರಿಕೆಗಳಿಗೆ ಕೊಡಲಾಗಿದೆ‘ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಹೇಳಿದರು.

‘ಸಮಾಜದವರು ಮೂಲ ಕಸಬು ಕಳೆದುಕೊಂಡು ಆರ್ಥಿಕ ಸಂಕಷ್ಟ ಎದುರುಸುತ್ತಿದ್ದಾರೆ. ಜೊತೆಗೆ ಕೃಷಿ ಮಾಡಿ ಬದುಕಬೇಕಾದ ಸ್ಥಿತಿ ನಮಗೆ ಬಂದಿದೆ. ರಾಜ್ಯ ಸರ್ಕಾರವು ಸಮುದಾಯದ ಜನರ ನೆರವಾಗಿ ಧಾವಿಸಬೇಕು‘ ಎಂದು ಮನವಿ ಮಾಡಿದರು.

‘ಈಡಿಗ ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪನೆ ಮಾಡಿಕೊಡಬೇಕು. ಆರ್ಥಿಕ ದುರ್ಬಲತೆ ಎದುರಿಸುವವರಿಗೆ ರಾಜ್ಯ ಸರ್ಕಾರ ಪರಿಹಾರದ ನೆರವು ನೀಡಬೇಕು‘ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.