ADVERTISEMENT

ಕೊಪ್ಪಳ: ಅಕ್ರಮ ಮರಳುಗಾರಿಕೆ ಪ್ರಶ್ನಿಸಿದ್ದಕ್ಕೆ ಭೂ ವಿಜ್ಞಾನಿ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 12:36 IST
Last Updated 1 ಮಾರ್ಚ್ 2025, 12:36 IST
   

ಕೊಪ್ಪಳ: ತಾಲ್ಲೂಕಿನ ಹಿರೇಸಿಂದೋಗಿ ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಭೂ ವಿಜ್ಞಾನಿ ನಾಗರಾಜು ಈ. ಮತ್ತು ಅವರ ವಾಹನ ಚಾಲಕ ಸಚಿನ್‌ ಗೌರಿಪುರ ಎಂಬುವರ ಮೇಲೆ ಹಲ್ಲೆಯಾಗಿದೆ.

ಹಿರೇಸಿಂದೋಗಿ ಪಕ್ಕದ ಹಿರೇಹಳ್ಳದಲ್ಲಿ ವ್ಯಾಪಕವಾಗಿ ಮರಳು ಸಾಗಣೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಮೂವರು ಸಿಬ್ಬಂದಿ ಟ್ರ್ಯಾಕ್ಟರ್‌ ಮತ್ತು ಟಿಪ್ಪರ್‌ಗಳಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ವಶಕ್ಕೆ ಪಡೆಯಲು ಹೋದಾಗ ಪುಂಡರು ದಾಳಿ ಮಾಡಿ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ.

‘ಮರಳು ಸಾಗಿಸುತ್ತಿದ್ದ ವಾಹನಗಳಿಗೆ ನೋಂದಣಿ ಸಂಖ್ಯೆ ಇರಲಿಲ್ಲ. ದಾಖಲೆಗಳನ್ನು ನೀಡುವಂತೆ ಕೇಳಿದರೂ ಕೊಡಲಿಲ್ಲ. ವಾಹನಗಳನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿದ್ದ ಐದು ಜನ ಸೇರಿಕೊಂಡು ಜೀವ ಬೆದರಿಕೆ ಒಡ್ಡಿ ಬಲವಂತವಾಗಿ ಟ್ರ್ಯಾಕ್ಟರ್‌ ಓಡಿಸಿಕೊಂಡು ಹೋಗಿದ್ದಾರೆ’ ಎಂದು ಭೂ ವಿಜ್ಞಾನಿ ನಾಗರಾಜು ನೀಡಿದ ದೂರಿನ ಮೇರೆಗೆ ಅಳವಂಡಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

ಚಿಕ್ಕಸಿಂದೋಗಿಯ ಗುಡದಪ್ಪ ಕಾಸಲೇರ, ಶಬ್ಬೀರಸಾಬ್‌ ವಾಲಿಕಾರ, ಮಲ್ಲಪ್ಪ ಚಿಕ್ಕೇನಕೊಪ್ಪ, ವೀರಯ್ಯ ಹಿರೇಮಠ ಮತ್ತು ಚಿಕ್ಕೇನಕೊಪ್ಪದ ಯಲ್ಲಪ್ಪ ತಲ್ಲೂರ ವಿರುದ್ಧ ದೂರು ದಾಖಲಾಗಿದೆ.

ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ‘ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಅವಕಾಶ ಕೊಡುವುದಿಲ್ಲ. ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.