ಕೊಪ್ಪಳ: ಇಲ್ಲಿನ ಗವಿಸಿದ್ಧೇಶ್ವರ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಆರೋಗ್ಯ ಭಾರತಿ ಕರ್ನಾಟಕ ಉತ್ತರ ಹಾಗೂ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅ. 10 ಮತ್ತು 11ರಂದು ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಗವಿದೀಪ್ತಿ 2K25 ಕೌಶಲ ಭಾರತಿ 2.0 ಅಂತರರಾಷ್ಟ್ರೀಯ ವಿಚಾರ ಸಂಕಿರಣ ಜರುಗಲಿದೆ.
ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಎಂ. ಸಾಲಿಮಠ ಅವರು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ‘ವಿಚಾರ ಸಂಕಿರಣವು ಆಯುರ್ವೇದ, ಶಿಕ್ಷಣ, ವೈದ್ಯಕೀಯ ಕೌಶಲಗಳು ಮತ್ತು ಸಂಶೋಧನೆಯಲ್ಲಿನ ಶ್ರೇಷ್ಠತೆಯನ್ನು ಪೋಷಿಸಲು ಮೀಸಲಾಗಿರುವ ದೂರದೃಷ್ಟಿಯ ಚಳವಳಿಯಾಗಿವೆ. ಪ್ರಸ್ತುತ ದಿನಮಾನಗಳಲ್ಲಿ ಜನರಿಗೆ ಸವಾಲಾಗಿರುವ ಆರೋಗ್ಯ ನಿರ್ವಹಣೆಗೆ ಆಯುರ್ವೇದದ ಅಗತ್ಯತೆಯನ್ನು ಬಲಪಡಿಸುವ ಕುರಿತು ಸಂಕಿರಣದಲ್ಲಿ ವಿಚಾರ ವಿನಿಮಯ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
‘ಆಯುರ್ವೇದದಲ್ಲಿ ಶಸ್ತ್ರಚಿಕಿತ್ಸೆ, ಪ್ಯಾರಾ ಸರ್ಜಿಕಲ್, ಪಂಚಕರ್ಮಿ, ಮಹಿಳೆಯರ ಆರೋಗ್ಯ ಕಾರ್ಯವಿಧಾನಗಳು, ಆಚಾರ್ಯ ಸುಶ್ರೂತರ ಯೋಗಸೂತ್ರಕ್ಕೆ ಅನುಗುಣವಾಗಿ ಕೌಶಲ ಆಧಾರಿತ ಪ್ರದರ್ಶನ ಮತ್ತು ಪ್ರಾಯೋಗಿಕ ತರಬೇತಿ, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಮತ್ತು ವಿದ್ವಾಂಸರಿಗಾಗಿ ಪೇಪರ್, ಪೋಸ್ಟರ್ ಮತ್ತು ಕಾರ್ಯ ಮಾದರಿ ಸ್ಪರ್ಧೆಗಳು, ಆಯುರ್ವೇದ ನಾವೀನ್ಯತೆಗಳು ಅಪ್ಲಿಕೇಷನ್‌ಗಳು, ಪರಿಕರಗಳ ಪ್ರದರ್ಶನ ನಡೆಯಲಿದೆ’ ಎಂದು ಮಾಹಿತಿ ನೀಡಿದೆ.
‘ಪ್ರಸ್ತುತ ದಿನಮಾನಗಳಲ್ಲಿ ಅಗತ್ಯವಾಗಿರುವ ಅಂಗಾಂಗ ದಾನಗಳ ಬಗ್ಗೆ ಜಾಗೃತಿ ಮೂಡಿಸುವುದರ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದು, ಅಂದಾಜು 600 ಜನ ಪಾಲ್ಗೊಳ್ಳುವರು. ಜನರಲ್ಲಿ ಜಾಗೃತಿ ಮೂಡಿಸಲು ಅ. 10ರಂದು ಜಾಥಾ ನಡೆಯಲಿದೆ’ ಎಂದು ತಿಳಿಸಿದರು.
ಕಾಲೇಜಿನ ಉಪಪ್ರಾಚಾರ್ಯ ಡಾ. ಎಸ್.ಎನ್. ಹಕ್ಕಂಡಿ, ಆರೋಗ್ಯಭಾಗ್ಯ ಕರ್ನಾಟಕ ಉತ್ತರದ ಅಧ್ಯಕ್ಷ ಡಾ. ಸಿದ್ದನಗೌಡ ಪಾಟೀಲ, ಪ್ರಾಧ್ಯಾಪಕ ಡಾ. ಜಿ.ಜಿ. ಪಾಟೀಲ ಹಾಗೂ ಡಾ. ಶ್ರೀಧರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.