ADVERTISEMENT

‘ಆಯುರ್ವೇದ ಜೀವನಶೈಲಿ, ಆಹಾರ ಪದ್ಧತಿ’

ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ವಾರ್ಷಿಕ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:33 IST
Last Updated 14 ಸೆಪ್ಟೆಂಬರ್ 2024, 15:33 IST
ಕೊಪ್ಪಳದಲ್ಲಿ ಶನಿವಾರ ನಡೆದ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ವಾರ್ಷಿಕ ಘಟಿಕೋತ್ಸವವನ್ನು ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಎಸ್. ಶ್ರೀಧರ ಉದ್ಘಾಟಿಸಿದರು
ಕೊಪ್ಪಳದಲ್ಲಿ ಶನಿವಾರ ನಡೆದ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ವಾರ್ಷಿಕ ಘಟಿಕೋತ್ಸವವನ್ನು ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಎಸ್. ಶ್ರೀಧರ ಉದ್ಘಾಟಿಸಿದರು   

ಕೊಪ್ಪಳ: ‘ಆಯುರ್ವೇದವು ಜೀವನಶೈಲಿ, ಆಹಾರ ಪದ್ಧತಿಯ ವಿಜ್ಞಾನವಾಗಿದೆ. ರೋಗಗಳಿಗಲ್ಲದೇ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಆಯುರ್ವೇದ ಬಳಕೆ ಅತ್ಯವಶ್ಯಕ’ ಎಂದು ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ. ಬಿ.ಎಸ್.ಶ್ರೀಧರ ಹೇಳಿದರು.

ನಗರದಲ್ಲಿ ಶನಿವಾರ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ವೈದ್ಯ ವಿದ್ಯಾರ್ಥಿಗಳಿಗೆ ನಡೆದ ವಾರ್ಷಿಕ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ‘ಆಯುರ್ವೇದ ಓದಿದ ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ದೀರ್ಘಕಾಲೀನ ರೋಗಗಳಿಗೆ ಪಂಚಕರ್ಮ ಚಿಕಿತ್ಸೆ ಹಾಗೂ ಆಯುರ್ವೇದ ಪದ್ಧತಿಯಲ್ಲಿಯೇ ವೃತ್ತಿನಿರತರಾಗುವುದು ಒಳಿತು. ಇವೆಲ್ಲರ ಜೊತೆಗೆ ಯೋಗ, ಮಾನಸಿಕ ಚಿಕಿತ್ಸೆಗೂ ಪ್ರಾಮುಖ್ಯತೆ ಕೊಡಬೇಕು’ ಎಂದು ತಿಳಿಸಿದರು. 

ಆಯುರ್ವೇದ ಕಾಲೇಜಿನ ಅಧ್ಯಕ್ಷ ಸಂಜಯ ಕೊತಬಾಳ ಮಾತನಾಡಿ ‘ವೈದ್ಯರು ಸಮಗ್ರತೆ, ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸಮಾಜದ ಒಳಿತಿಗೆ ಕೆಲಸ ಮಾಡಬೇಕು. ವೈದ್ಯವೃತ್ತಿಯಲ್ಲಿ ಮೌಲ್ಯಗಳನ್ನು ಪಾಲಿಸುವುದರ ಜತೆಗೆ ನಿರಂತರ ಅಭ್ಯಾಸದ ಅವಶ್ಯಕತೆಯಿದೆ’ ಎಂದರು.

ADVERTISEMENT

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಹಾಂತೇಶ ಸಾಲಿಮಠ ಮಾತನಾಡಿ ‘ಆಧುನಿಕತೆಯ ಯುಗದಲ್ಲಿ ಆಯುರ್ವೇದದ ಸಮಗ್ರ ಜ್ಞಾನವನ್ನು ರೋಗಿಗಳ ಚಿಕಿತ್ಸೆಯಲ್ಲಿ ಬಳಸಿದರೆ ಅತ್ಯಂತ ಉತ್ತಮ ವೈದ್ಯರಾಗಬಹುದು’ ಎಂದು ಸಲಹೆ ನೀಡಿದರು.

ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ ಸುಮಾರು 130 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೀವಗಾಂಧಿ ವಿಶ್ವವಿದ್ಯಾಲಯದ ಪದವಿ ವಿಭಾಗದಲ್ಲಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೊದಲನೆ ಸ್ಥಾನ ಪಡೆದ ಡಾ.ಶ್ರೀರಕ್ಷಾ, ಡಾ.ತ್ರಿವೇಣಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಡಾ.ಮಮತಾ ಜೋಶಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಹತ್ತನೇ ಸ್ಥಾನ ಪಡೆದ ಶಾಲಾಕ್ಯತಂತ್ರ ವಿಭಾಗದ ಡಾ.ಗಗನಾ ಅವರಿಗೆ ಪ್ರಶಸ್ತಿ ನೀಡಲಾಯಿತು.

ರಾಜೀವಗಾಂಧಿ ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲ್ಯೂ ಪಡೆದ ಡಾ.ಸಿದ್ಧಾರ್ಥ ಮಾಲಿಪಾಟೀಲ, ಡಾ.ನೇತ್ರಾ ಪೂಜಾರ, ಡಾ.ಚೈತ್ರಾ ಶಾಸ್ತ್ರಿಮಠ ಹಾಗೂ ಡಾ.ಕಾವೇರಿ ಮೇಟಿ ಅವರಿಗೂ ಗೌರವ ಪ್ರದಾನ ಮಾಡಲಾಯಿತು.

ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಡಾ.ಅಪೂರ್ವ ಭಾಜನರಾದರು. ಉಪಪ್ರಾಂಶುಪಾಲ ಡಾ.ಸುರೇಶ ಹಕ್ಕಂಡಿ ವಂದನಾರ್ಪಣೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.