ADVERTISEMENT

ಕುರಿಗಾಹಿ ಯುವಕನ ಮೇಲೆ ಹಲ್ಲೆ ಖಂಡಿಸಿ ಬಲ್ಡೋಟಾ ಕಂಪನಿ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 10:35 IST
Last Updated 26 ಜುಲೈ 2025, 10:35 IST
   

ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿರುವ ಬಲ್ಡೋಟಾ ಕಂಪನಿಯ ಭದ್ರತಾ ಸಿಬ್ಬಂದಿ ಕುರಿಗಾಹಿ ದೇವಪ್ಪ ಹಾಲಹಳ್ಳಿ ಮೇಲೆ ನಡೆಸಿದ್ದ ಹಲ್ಲೆ ಖಂಡಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಪದಾಧಿಕಾರಿಗಳು ಹಾಗೂ ರೈತರು ಶನಿವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಅಶೋಕ ವೃತ್ತದಿಂದ ಗಂಜ್‌ ಸರ್ಕಲ್‌ ತನಕ ಮೆರವಣಿಗೆ ನಡೆಸಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಲ್ಲೆಗೊಳಗಾದ ಕುರಿಗಾಹಿ ಯುವಕನಿಗೆ ನ್ಯಾಯ ಒದಗಿಸಬೇಕು, ಬಲ್ಡೋಟಾ ಸಂಸ್ಥೆ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಕೈ ಬಿಡಬೇಕು ಎಂದು ಆಗ್ರಹಿಸಿದರು.

‘ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2006ರಲ್ಲಿ ಆಗಿನ ಸರ್ಕಾರ ಬಲವಂತವಾಗಿ ರೈತರಿಂದ 1034 ಎಕರೆ ಫಲವತ್ತಾದ ಭೂಮಿ ಕಸಿದುಕೊಂಡು ಕಾರ್ಖಾನೆ ವಿಸ್ತರಣೆಗೆ ನೀಡಿದೆ. ಅದರಲ್ಲಿ ಬಸಾಪುರ ಕೆರೆಯಿದ್ದು ಆ ಕೆರೆಯನ್ನು ಜನ ಹಾಗೂ ಜಾನುವಾರುಗಳ ಬಳಕೆಗೆ ಮುಕ್ತವಾಗಿಸಬೇಕು ಎಂದು ಹೇಳುತ್ತಲೇ ಇದ್ದರೂ ಕಂಪನಿಯವರು ಒಪ್ಪಿಕೊಳ್ಳುತ್ತಿಲ್ಲ. ಹೀಗಾದರೆ ಜಾನುವಾರುಗಳು ನೀರು ಕುಡಿಯಲು ಎಲ್ಲಿಗೆ ಹೋಗಬೇಕು’ ಎಂದು ಹೋರಾಟಗಾರರು ಪ್ರಶ್ನಿಸಿದರು.

ADVERTISEMENT

‘ಕುರಿಗಳನ್ನು ಕರೆದುಕೊಂಡು ಶುಕ್ರವಾರ ದೇವಪ್ಪ ಕೆರೆಯತ್ತ ಹೋದಾಗ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಂಪನಿಯ ಪ್ರಚೋದನೆಯಿಂದ ಅಲ್ಲಿನ ಭದ್ರತಾ ಸಿಬ್ಬಂದಿ ಮನಬಂದಂತೆ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಬಳಿಕ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗುಲಾ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ್, ಶರಣು ಗಡ್ಡಿ, ಮಂಜುನಾಥ ಗೊಂಡಬಾಳ, ಬಸವರಾಜ ಶೀಲವಂತರ, ಎಸ್‌.ಎ. ಗಫಾರ್‌, ಕಾಶಪ್ಪ ಛಲವಾದಿ, ಶರಣು ಶೆಟ್ಟರ್, ಮಕಬುಲ್, ಮಂಗಳೇಶ ರಾಥೋಡ್, ಹನುಮಂತ ಕಟಗಿ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮುದುಕಪ್ಪ ಮೇಸ್ತ್ರಿ, ಭೀಮಸೇನ್‌ ಕಲಿಕೇರಿ, ಟಿ ರತ್ನಾಕರ್, ಶಿವಪ್ಪ ದೇವರಮನಿ, ಸೋಮಪ್ಪ ಇರಕಲ್ಲಗಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.