ADVERTISEMENT

ದಲಿತರ ನಡುವೆ ಒಡಕು ತರಲು ಕುಮ್ಮಕ್ಕು: ಆರೋಪ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 15:27 IST
Last Updated 6 ಮಾರ್ಚ್ 2025, 15:27 IST

ಕೊಪ್ಪಳ: ‘ಉಕ್ಕಿನ ಕಾರ್ಖಾನೆ ಸ್ಥಾಪಿಸಿದರೆ ಜಿಲ್ಲಾಕೇಂದ್ರದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ಮೊದಲ ದಿನದಿಂದಲೇ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಆದರೆ ಬಲ್ಡೋಟಾ ಕಂಪನಿ ದಲಿತ ಸಂಘಟನೆಗಳ ನಡುವೆ ಒಡಕು ಮೂಡಿಸಲು ಹುನ್ನಾರ ಮಾಡುತ್ತಿದೆ’ ಎಂದು ದಲಿತ ಸಂಘಟನೆಗಳ ಮುಖಂಡರು ಆರೋಪಿಸಿದರು.

ಮಾದಿಗ ಮಹಾಸಭಾ ಜಿಲ್ಲಾ ಮುಖಂಡ ಮಲ್ಲಿಕಾರ್ಜುನ ಪೂಜಾರ, ಅಂಬೇಡ್ಕರ್‌ ಸೇನೆ ಜಿಲ್ಲಾಧ್ಯಕ್ಷ ಸಿದ್ದು ಮಣ್ಣಿನವರ, ಗೌರವಾಧ್ಯಕ್ಷ ಯಂಕಪ್ಪ ಹೊಸಳ್ಳಿ, ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಕೋರ್‌ ಕಮಿಟಿ ಪ್ರಮುಖ ಯಲ್ಲಪ್ಪ ಹಳೇಮನಿ ಮತ್ತು ಕೊಪ್ಪಳ ಬಚಾವೊ ಜನಾಂದೋಲನ ಸಮಿತಿ ಪ್ರಮುಖ ಮೂಕಪ್ಪ ಮೇಸ್ತ್ರಿ ಬಸಾಪುರ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

‘ಕಾರ್ಖಾನೆಯಿಂದ ಅಗುವ ನೋವನ್ನು ಒಂದೂ ದಿನ ಅನುಭವಿಸದವರು, ಅದರ ಕಷ್ಟ ತಿಳಿಯದ ಗಂಗಾವತಿ ಭಾಗದ ದಲಿತ ಸಮುದಾಯದ ಮುಖಂಡರು ಬುಧವಾರ ಪತ್ರಿಕಾಗೋಷ್ಠಿ ಮಾಡಿ ಕಾರ್ಖಾನೆ ಬೇಕು ಎಂದು ಹೇಳಿದ್ದಾರೆ. ಅವರು ಕಂಪನಿಯ ಕುಮ್ಮಕ್ಕಿನಿಂದ ಬಂದು ಈ ಕೆಲಸ ಮಾಡಿರುವ ಶಂಕೆಯಿದೆ. ಕಾರ್ಖಾನೆ ಆರಂಭಕ್ಕೆ  ಬೆಂಬಲ ನೀಡುವವರು ಅವು ದಲಿತರಿಗೆ ಎಷ್ಟು ಉದ್ಯೋಗ ನೀಡಿವೆ ಎನ್ನುವುದರ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಕೆಲ ದಲಿತ ಸಂಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ಬಲ್ಡೋಟಾ ಕಂಪನಿಯವರು ಸಮುದಾಯದವರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಂಘಟನೆಗಳ ಲೆಟರ್‌ ಪ್ಯಾಡ್‌ ದುರ್ಬಳಕೆ ಮಾಡಿಕೊಂಡಿದ್ದಾರೆ. ಇಲ್ಲಿನ ಎಲ್ಲ ಘಟನೆಗಳನ್ನು ಸಮುದಾಯದ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇವೆ. ಕಾರ್ಖಾನೆಯವರಿಗೆ ದಲಿತ ಮುಖಂಡರನ್ನು ಹಿಡಿದಿಟ್ಟುಕೊಂಡರೆ ಹೋರಾಟ ಗೆಲ್ಲುತ್ತೇವೆ ಎನ್ನುವ ಭ್ರಮೆಯಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.