ಬಸನಗೌಡ ಪಾಟೀಲ ಯತ್ನಾಳ
ಕೊಪ್ಪಳ: ಹಿಂದೂ ಹಾಗೂ ಮುಸ್ಲಿಮರ ನಡುವೆ ಸೌಹಾರ್ದಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮೇಲೆ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.
ಮುಸ್ಲಿಂ ಯುವಕನಿಂದ ಆಗಸ್ಟ್ 3ರಂದು ಇಲ್ಲಿನ ಕುರುಬರ ಓಣಿಯ ಗವಿಸಿದ್ದಪ್ಪ ನಾಯಕ ಎನ್ನುವ ಯುವಕನ ಕೊಲೆಯಾಗಿತ್ತು. ಅವರ ಕುಟುಂಬದವರಿಗೆ ಸಾಂತ್ವಾನ ಹೇಳಲು ಆ. 10ರಂದು ಕೊಪ್ಪಳಕ್ಕೆ ಬಂದಿದ್ದ ಯತ್ನಾಳ ‘ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ₹5 ಲಕ್ಷ ಕೊಡುತ್ತೇನೆ. ಕೊಲೆ ಮಾಡುವ ಮುಸ್ಲಿಮರಿಗೆ ಉತ್ತರ ನೀಡಬೇಕಿದೆ. ಸದ್ಯ ರಾಜ್ಯದಲ್ಲಿ ಸಾಬರ ಸರ್ಕಾರವಿದೆ’ ಎಂದು ಹೇಳಿಕೆ ನೀಡಿದ್ದರು. ಇದು ಸಾಕಷ್ಟು ಟೀಕೆಗೂ ಕಾರಣವಾಗಿತ್ತು.
ಆದ್ದರಿಂದ ಇಲ್ಲಿನ ಕುವೆಂಪು ನಗರದ ನಿವಾಸಿಯಾಗಿರುವ ಅಬ್ದುಲ್ ಕಲಾಂ ದೂರು ನೀಡಿದ್ದು ‘ಯತ್ನಾಳ ಹೇಳಿಕೆಯಿಂದಾಗಿ ಎರಡು ಧರ್ಮಗಳ ನಡುವೆ ದ್ವೇಷ ಬೆಳೆಯುವಂತಾಗಿದೆ. ಮುಸ್ಲಿಂ ಮಹಿಳೆಯರನ್ನು ಕೀಳಾಗಿ ಕೆಟ್ಟ ಮನಸ್ಥಿತಿಯಿಂದ ನೋಡುವುದಲ್ಲದೆ ಅವರನ್ನು ಅವಮಾನ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.