ADVERTISEMENT

ಬಸವರಾಜಗೆ ‘ಜಿಲ್ಲಾ ಶಿಕ್ಷಕ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 16:06 IST
Last Updated 6 ಸೆಪ್ಟೆಂಬರ್ 2020, 16:06 IST
ಬಸವರಾಜ ರೊಡ್ಡ
ಬಸವರಾಜ ರೊಡ್ಡ   

ಹನುಮಸಾಗರ: ಸಮೀಪದ ಮಲಕಾಪೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ರೊಡ್ಡ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ಧಾರೆ.

ಸೋಮವಾರ ಕೊಪ್ಪಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸಮುದಾಯದ ಜತೆಗೆ ಹೊಂದಾಣಿಕೆ, ಮಕ್ಕಳ ಮೇಲಿನ ವೈಯಕ್ತಿಕ ಕಾಳಜಿ, ಕ್ರಿಯಾಶೀಲತೆ, ಸಮಯಪ್ರಜ್ಞೆ ಹಾಗೂ ಸೃಜನಶೀಲತೆಯ ಕಾರಣ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ADVERTISEMENT

ಸಾಹಿತಿಯೂ ಆಗಿರುವ ಇವರು ಪರಿಕಲ್ಪನೆಗೆ ತಕ್ಕಂತೆ ಕತೆ, ಹಾಡುಗಳನ್ನು ಸೃಷ್ಟಿಸಿ ಬೋಧನೆ ಮಾಡುವಲ್ಲಿ ಆಸಕ್ತಿ ತೋರುತ್ತಾರೆ.

‘ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ಮಕ್ಕಳಿಗೆ ಅವರೇ ತರಬೇತಿ ನೀಡುತ್ತಾರೆ. ಕಾರಣ ಪ್ರತಿವರ್ಷ ಬಡವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ’ ಎಂದು ಮುಖ್ಯಶಿಕ್ಷಕ ಮಲ್ಲಪ್ಪ ಗೊಂದಿ ಹೇಳುತ್ತಾರೆ.

ಸಾರ್ವಜನಿಕರ ನೆರವು ಪಡೆದುಕೊಂಡು ಶಾಲೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹೊಂದಿಸಿದ್ದಾರೆ. ರಂಗ ಕ್ಷೇತ್ರದಲ್ಲೂ ಆಸಕ್ತಿ ಹೊಂದಿರುವ ಅವರು ತಾವೇ ಬರೆದ ನಾಟಕಗಳನ್ನು ಮಕ್ಕಳ ಮೂಲಕ ಪ್ರದರ್ಶನ ಮಾಡಿಸುತ್ತಾರೆ.

ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮದ ಓಣಿ ಓಣಿಗಳಿಗೆ ತೆರಳಿ ಯುವಕರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡು ಜನರಿಗೆ ಅರಿವು ಮೂಡಿಸಿದ್ದನ್ನು ಜನ ನೆನಪಿಸಿಕೊಳ್ಳುತ್ತಾರೆ.

ಅಕ್ಷರ ಫೌಂಡೇಶನ್ ಬೆಂಗಳೂರು ಇವರು ನಡೆಸಿದ ಗಣಿತ ಕಲಿಕಾ ಆಂದೋಲನ ಭಾಗವಹಿಸಿದ್ದ ಬಸವರಾಜ ಗಣಿತದ ಅತ್ಯುತ್ತಮ ಚಟುವಟಿಕೆಗಳನ್ನು ನಿರ್ವಹಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗ್ರಾಮಸ್ಥರ ನೆರವಿನಲ್ಲಿ ತಮ್ಮ ಶಾಲೆಯನ್ನು ವಿಮಾ ಶಾಲೆಯನ್ನಾಗಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.