ಕರಡಿ
ಕುಕನೂರು: ತಾಲ್ಲೂಕಿನ ಗಾವರಾಳ, ಬೂದುಗುಂಪಿ, ಮಂಗಳೂರು ಮತ್ತು ರಾವಣಕಿ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಕರಡಿ ಹಾಗೂ ಚಿರತೆಗಳು ಕಾಣಿಸುತ್ತಿದ್ದು, ರೈತರು ಭಯಭೀತರಾಗಿದ್ದಾರೆ.
ಜಮೀನುಗಳಿಗೆ ಹೋಗುವವರು ಹೆದರುವಂತಾಗಿದೆ. ವಾಯುವಿಹಾರ ಹಾಗೂ ಶಾಲಾ–ಕಾಲೇಜುಗಳಿಗೆ ಹೋಗುವವರೂ ಆತಂಕಕ್ಕೀಡಾಗಿದ್ದಾರೆ.
‘ಕರಡಿಗಳ ಹಾವಳಿಗೆ ಆತಂಕದಲ್ಲಿ ದಿನ ದೂಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕರಡಿಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಬೋನು ಇರಿಸಿ ಕರಡಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಅಶೋಕ್.
ರೈತರಿಗೆ ನಿದ್ದೆ ಇಲ್ಲ: ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆಯೂ ಸಮೃದ್ಧಿವಾಗಿ ಬೆಳೆದು ನಿಂತಿದೆ. ರಾತ್ರಿ ವೇಳೆ ಕರಡಿಗಳ ಹಾವಳಿಯಿಂದ ರೈತರು ನಿದ್ದೆಗೆಡುವಂತಾಗಿದೆ. ಬೆಳೆದ ಫಸಲು ಉಳಿಸಿಕೊಳ್ಳಲು ರಾತ್ರಿಯಿಡೀ ಹೊಲಗಳಲ್ಲಿ ಬಿಡಾರ ಹೂಡಿ ಜಾಗರಣೆ ಮಾಡಬೇಕಾದ ಸ್ಥಿತಿ ಎದುರಾಗಿದೆ. ಕೈಯಲ್ಲಿ ಕೋಲು ಹಾಗೂ ಟಾರ್ಚ್ ಹಿಡಿದು ಹೊಲದ ಸುತ್ತಲೂ ಕಾವಲು ನಿಲ್ಲುವಂತಾಗಿದೆ.
ಪಟಾಕಿ ಹಚ್ಚಬೇಕು: ಹೊಲಗಳಲ್ಲಿ ಕರಡಿ ಹಾವಳಿ ತಪ್ಪಿಸಲು ಹಲಗೆ ಬಾರಿಸಬೇಕು. ಪಟಾಕಿ ಸಿಡಿಸಬೇಕು. ಇಲ್ಲವೇ ರಾತ್ರಿಯಿಡೀ ಕೇಕೇ ಹಾಕಬೇಕು. ಇಷ್ಟಾದರೂ ಸ್ವಲ್ಪ ಮೈ–ಮರೆತು ಕುಳಿತರೆ ಕರಡಿಗಳ ಸದ್ದು ಪಕ್ಕದಲ್ಲಿಯೇ ಕೇಳುತ್ತದೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಕಸರತ್ತು ನಡೆಸುತ್ತಿದ್ದಾರೆ.
ಗಾವರಾಳ ಗ್ರಾಮದಲ್ಲಿ ಚಿರತೆಗಳ ಹಾವಳಿ ವಿಪರೀತವಾಗಿದೆ. ಗ್ರಾಮದ ಸುತ್ತಮುತ್ತ ಕಲ್ಲು ಕ್ವಾರಿಗಳಿರುವುದರಿಂದ ಮೂರ್ನಾಲ್ಕು ಚಿರತೆಗಳು ವಾಸ ಮಾಡುತ್ತಿವೆ. ಸುಮಾರು ಎರಡು ವರ್ಷಗಳಿಂದ ಗ್ರಾಮಗಳ ಒಳಗೆ, ಹೊರಗೆ ಹಾಗೂ ಕೆಲಸ ಮಾಡುವಾಗ ಚಿರತೆಗಳು ಕಾಣಿಸಿಕೊಂಡು ಭಯಭೀತರಾಗಿದ್ದೇವೆ ಎಂದು ಗ್ರಾಮಸ್ಥರು ಹೇಳಿದರು.
ನಮ್ಮ ಸಿಬ್ಬಂದಿ ಕರಡಿ ಹಾಗೂ ಚಿರತೆ ಹಿಡಿಯುವ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತೆ ಕಾಣಿಸಿಕೊಂಡರೆ ಮತ್ತು ಬರಿಸುವ ಇಂಜೆಕ್ಷನ್ ನೀಡಿ ಬೇರೆ ಕಡೆ ಸ್ಥಳಾಂತರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಸ್ವಾತಿ ಎಲ್. ತಿಳಿಸಿದರು.
ಕರಡಿ ಹಾಗೂ ಚಿರತೆಗಳ ಹಾವಳಿ ವಿಪರೀತವಾಗಿದೆ. ಹೊಲದಲ್ಲಿ ಕೆಲಸ ಮಾಡುವಾಗ ತಕ್ಷಣ ಪ್ರತ್ಯಕ್ಷವಾಗುತ್ತವೆ. ಅದನ್ನು ಕಂಡು ಭಯಭೀತರಾಗಿ ಎಷ್ಟೋ ಸಲ ಓಡಿ ಹೋಗಿದ್ದೇವೆರಮೇಶ ಎಚ್ ರೈತ ಮಂಗಳೂರು
ರಾತ್ರಿ ವೇಳೆ ಕರಡಿಗಳು ಹೊಲದಲ್ಲಿ ಬೆಳೆ ನಾಶ ಮಾಡುತ್ತಿವೆ. ಅರಣ್ಯ ಇಲಾಖೆಯವರು ಕರಡಿಗಳನ್ನು ಸ್ಥಳಾಂತರಿಸುವ ಕಾರ್ಯ ತಕ್ಷಣ ಮಾಡಬೇಕುಮಹಾಂತೇಶ ಗಾವರಾಳ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.