ಕುಷ್ಟಗಿ: ಮೂರು ತಲೆ ಮಾರುಗಳಿಂದಲೂ ವೀಳ್ಯದೆಲೆ ಬಳ್ಳಿ ಬೇಸಾಯವನ್ನೇ ನೆಚ್ಚಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತ ಬಂದಿರುವ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮದ ತೋಟದ ಕುಟುಂಬ ಅದರಲ್ಲೇ ಬದುಕು ಕಟ್ಟಿಕೊಂಡು ಯಶಸ್ವಿಯಾಗಿದೆ.
ವ್ಯಾಪಾರ ವಹಿವಾಟು ಆಗಿದ್ದರೆ ಲಾಭ ನಷ್ಟದ ಲೆಕ್ಕಾಚಾರ ಇರುತ್ತದೆ. ಆದರೆ ರೈತನಲ್ಲಿ ಅಂಥ ಯೋಚನೆ ಎಂದೂ ಬರುವುದಿಲ್ಲ. ಕೃಷಿ ಬದುಕೇ ಅಂಥದ್ದು. ಇತರೆ ಬೆಳೆಗಳಿಂದ ಕೈಸುಟ್ಟುಕೊಂಡರೂ ನಂಬಿದ ಎಲೆಬಳ್ಳಿ ಮಾತ್ರ ಎಂದೂ ಕೈಕೊಡದೆ ತೋಟದ ಅವರ ಕುಟುಂಬದ ಬಾಳಿಗೆ ಬೆಳಕು ತಂದಿದೆ.
ಮೂರು ದಶಕಗಳ ಹಿಂದೆ ಎಲೆಬಳ್ಳಿಗಾಗಿ ಹೊಲ ಸಿದ್ಧತೆ ಮಾಡಿರುವ ಈ ಕುಟುಂಬದ ಹಿರಿಯರಾಗಿದ್ದ ದೊಡ್ಡಪ್ಪ ತೋಟದ ಅವರ ಪರಿಶ್ರಮ, ಯಶೋಗಾಥೆ ಗಮನಿಸಿದರೆ ಡಾ.ರಾಜಕುಮಾರ ಅಭಿನಯದ ಬಂಗಾರದ ಮನುಷ್ಯ ಚಲನಚಿತ್ರದ ದೃಶ್ಯ ನೆನಪಿಗೆ ಬರುತ್ತದೆ. ಮೊದಲು ಈ ಜಮೀನು ದೊಡ್ಡದೊಡ್ಡ ಗುಂಡುಕಲ್ಲು, ಮುಳ್ಳುಕಂಟಿಗಳಿಂದ ಆವೃತವಾಗಿತ್ತು. ಯಂತ್ರಗಳು ಇಲ್ಲದ ಕಾಲದಲ್ಲಿಯೇ ಸಾಕಷ್ಟು ಶ್ರಮವಹಿಸಿದ ದೊಡ್ಡಪ್ಪ ತೋಟದ ಮತ್ತು ಅವರ ಮಕ್ಕಳು ಕಲ್ಲುಗಳನ್ನೆಲ್ಲ ತೆರವುಗೊಳಿಸಿದ್ದಾರೆ. ಆಗಿನಿಂದ ಆರಂಭವಾದ ವೀಳ್ಯದೆಲೆಬಳ್ಳಿ ಕೃಷಿ ಅವರ ಮೊಮ್ಮಕ್ಕಳ ಕಾಲದಿಂದಲೂ ಮುಂದುವರಿದಿದ್ದು ಅವರು ನಡೆಸುತ್ತ ಬಂದ ಬೇಸಾಯ, ಮಾರಾಟ ಪದ್ಧತಿ ಇತರೆ ರೈತರಿಗೆ ಪ್ರೇರಣೆಯಂತಾಗಿದೆ.
16 ಜನರನ್ನು ಒಳಗೊಂಡ ಅವರ ಅವಿಭಕ್ತ ಕುಟುಂಬಕ್ಕೆ ಎಲೆಬಳ್ಳಿಯೇ ಆಸರೆಯಾಗಿದ್ದು ವರ್ಷದುದ್ದಕ್ಕೂ ಕೈತುಂಬ ಉದ್ಯೋಗ ನೀಡಿದೆ. ಒಂದೂವರೆ ಎಕರೆಯಲ್ಲಿ ನಾಲ್ಕು ಸಾವಿರ ಜವಾರಿ ಮತ್ತು ರಾಣಿ ಹೈಬ್ರೀಡ್ ತಳಿ ಕರಿ ಎಲೆಬಳ್ಳಿ ಕಡ್ಡಿಗಳನ್ನು ನೆಡಲಾಗಿದೆ. ವರ್ಷಪೂರ್ತಿ ಕೆಲಸ. ಹತ್ತಿ, ಈರುಳ್ಳಿ ಹಾಕಿ ಆರ್ಥಿಕವಾಗಿ ನೆಲಕಚ್ಚಿದ ಈ ಕುಟುಂಬವನ್ನು ವೀಳ್ಯೆದೆಲೆ ಬೆಳೆ ಎತ್ತಿ ಹಿಡಿದು ಆರ್ಥಿಕ ಸಂಕಷ್ಟವನ್ನೂ ದೂರ ಮಾಡಿದೆ.
ಹೀಗಿದೆ ಬೇಸಾಯ ಕ್ರಮ: ಬೇರೆ ರೈತರಿಂದ ಕುರಿಗಳ ಗೊಬ್ಬರ ಖರೀದಿಸಿ ವರ್ಷದಲ್ಲಿ ಮೂರು ಬಾರಿ ಎಲೆ ಬಳ್ಳಿಗೆ ಹಾಕುವುದು, ಸಂಪೂರ್ಣ ಸಾವಯವದಲ್ಲಿ ಉತ್ತಮ ರೀತಿಯಲ್ಲಿ ಬೇಸಾಯ ಕ್ರಮ ಅನುಸರಿಸಲಾಗಿದೆ. ತೋಟದ ಒಳಗೆ ಹೋದರೆ ಹೊರಬರಲು ಮನಸ್ಸಾಗುವುದಿಲ್ಲ. ಉತ್ತಮ ನಿರ್ವಹಣೆಯಿಂದ ಎಲೆಬಳ್ಳಿ ಹುಲುಸಾಗಿ ಬೆಳೆದು ನಿಂತಿದೆ. ಸಮರ್ಪಕ ನೀರು ನಿರ್ವಹಣೆ, ಬಳ್ಳಿಯನ್ನು ಇಳಿಸುವ ಕ್ರಮ ಹೀಗೆ ಪ್ರತಿಯೊಂದರಲ್ಲೂ ತೋಟದ ಕುಟುಂಬ ಅಚ್ಚುಕಟ್ಟುತನ ಗಮನಿಹರಿಸುವಂತಿದೆ. ನಿರ್ವಹಣೆಯಲ್ಲಿ ಸ್ವಲ್ಪ ಎಡವಿದರೂ ಎಲೆಬಳ್ಳಿ ಕೈಹಿಡಿಯುವುದಿಲ್ಲ ಎನ್ನುವುದು ಬಸವರಾಜ ತೋಟದ, ವೀರೇಶ ತೋಟದ ಸಹೋದರರ ಅನುಭವದ ಮಾತು.
ಹದಿನಾರು ಜನರ ಕುಟುಂಬ ಸದಸ್ಯರ ಅವಿರತ ಶ್ರಮ ಕಷ್ಟ ನಷ್ಟದ ಲೆಕ್ಕಾಚಾರವಿಲ್ಲದೆ ಕಾಯಕ ದೀಪಾವಳಿ ವೇಳೆ ಕೈಗೆಟುಕದ ವೀಳ್ಯದೆಲೆ ಬೆಲೆ
ಬಿರುಗಾಳಿಗೆ ಹಿಂದೆ ಕೆಲಬಾರಿ ಎಲೆಬಳ್ಳಿ ನೆಲಕಚ್ಚಿ ಹಾಳಾದಾಗ ನೆರವು ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ತೋಟಗಾರಿಕೆ ಇಲಾಖೆಯವರು ನಮ್ಮ ತೋಟದತ್ತ ಸುಳಿದಿಲ್ಲ.ವೀರೇಶ ತೋಟದ ರೈತ
ಹಿರಿಯರ ಮಾರ್ಗದರ್ಶನದಲ್ಲಿ ಎಲೆಬೆಳ್ಳಿ ಬೇಸಾಯ ಕೈಗೊಂಡಿದ್ದೇವೆ. ಬೇಸಾಯದಲ್ಲಿರುವ ಕಷ್ಟ ಲೆಕ್ಕಸಿದೆ ದುಡಿಮೆ ನಂಬಿ ಇಡಿ ಕುಟುಂಬದ ಶ್ರಮ ಹಾಕಿದ್ದರಿಂದ ಎಲೆಬಳ್ಳಿ ಬದುಕಿಗೆ ಆಸರೆಯಾಗಿದೆಬಸವರಾಜ ತೋಟದ ರೈತ
ಸ್ವತಃ ಮಾರಾಟಕ್ಕೂ ಸೈ
ವೀಳ್ಯದೆಲೆ ಬೇಸಾಯದಲ್ಲಿ ಕಷ್ಟ ನಷ್ಟವೂ ಇದೆ ಇಬ್ಬನಿ ಅತಿಯಾದ ಮಳೆ ಚಳಿಗಾಲದಲ್ಲಿ ಬಳ್ಳಿಗೆ ರೋಗಬಾಧೆಯಿಂದ ಎಲೆಗಳು ಉದುರುತ್ತವೆ. ಸದ್ಯ ದರ ಕಡಿಮೆ ಇದೆ ದೀಪಾವಳಿ ನಂತರ ಎಲೆ ಇಳುವರಿ ಕಡಿಮೆಯಾದರೂ ಭರ್ಜರಿ ಬೆಲೆ ದೊರೆಯುತ್ತದೆ. ವಾರದಲ್ಲಿ ನಾಲ್ಕು ಬಾರಿ ಕಟಾವು ಮಾಡಲಾಗುತ್ತಿದೆ. ಸದ್ಯ ₹ 1800-2000 ಬೆಲೆ ಇದೆ. ಇತ್ತೀಚಿನ ದಿನಗಳಲ್ಲಿ ಬೇಸಾಯದ ಖರ್ಚು ಹೆಚ್ಚಾಗುತ್ತಿದೆ. ಎಲೆ ಮಾರಾಟದ ದಲ್ಲಾಳಿಗಳ ಬಳಿ ಒಯ್ದರೆ ಬೆಲೆಯಲ್ಲಿ ನ್ಯಾಯ ಸಿಗುವುದಿಲ್ಲ. ಬಹಳಷ್ಟು ನಷ್ಟವೂ ಆಗಿದ್ದನ್ನು ಮನಗಂಡ ತೋಟದ ಸಹೋದರರು ತಾವೇ ಸ್ವತಃ ಸುತ್ತ ಮುತ್ತಲಿನ ತಾಲ್ಲೂಕು ಗ್ರಾಮಗಳಿಗೆ ತೆರಳಿ ಗ್ರಾಹಕರನ್ನು ಹುಡುಕಿಕೊಂಡು ಮಾರಾಟ ಮಾಡುತ್ತಿದ್ದು ಇದರಿಂದ ಹೆಚ್ಚಿನ ಲಾಭವಾಗುತ್ತಿದೆ. ಮನೆಯ ಎಲ್ಲ ಖರ್ಚುವೆಚ್ಚಗಳಿಗೂ ಆಸರೆಯಾಗಿ ವೀಳ್ಯದೆಲೆ ಕುಟುಂಬವನ್ನು ಸಲಹುತ್ತಿದೆ ಎನ್ನುತ್ತಾರೆ ರೈತ ವೀರೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.