ADVERTISEMENT

ಸಾಯಿನಗರ - ಕಡೆಬಾಗಿಲು ರಸ್ತೆ ಅಭಿವೃದ್ಧಿಗೆ ಭೂಮಿಪೂಜೆ

ಲೋಕೋಪಯೋಗಿ ಇಲಾಖೆ: ₹20ಕೋಟಿ ವೆಚ್ಚದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 5:09 IST
Last Updated 5 ಸೆಪ್ಟೆಂಬರ್ 2024, 5:09 IST
ಗಂಗಾವತಿ ಸಾಯಿನಗರದಲ್ಲಿ ಸಾಯಿನಗರ-ಕಡೆಬಾಗಿಲು ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ. ಜನಾರ್ದನರೆಡ್ಡಿ ಬುಧವಾರ ಭೂಮಿಪೂಜೆ ನೆರವೇರಿಸಿ ದರು.
ಗಂಗಾವತಿ ಸಾಯಿನಗರದಲ್ಲಿ ಸಾಯಿನಗರ-ಕಡೆಬಾಗಿಲು ವೃತ್ತದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ. ಜನಾರ್ದನರೆಡ್ಡಿ ಬುಧವಾರ ಭೂಮಿಪೂಜೆ ನೆರವೇರಿಸಿ ದರು.   

ಗಂಗಾವತಿ: ‘ಹನುಮನ ನಾಡು ಅಂಜನಾದ್ರಿ ಜಗತ್ತಿನಾದ್ಯಂತ ಪ್ರಸಿದ್ದಿ ಪಡೆದಿದ್ದು, ಈ ಕ್ಷೇತ್ರವನ್ನ ರಾಜ್ಯದ ಎರಡನೇ ಸಾಂಸ್ಕೃತಿಕ, ಆಧ್ಯಾತ್ಮಿಕ ನಗರವನ್ನಾಗಿಸಲು ₹500 ಕೋಟಿ ವೆಚ್ಚದಲ್ಲಿ ಮಾಸ್ಟರ್ ಪ್ಲಾನ್‌ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಅಭಿಪ್ರಾಯಪಟ್ಟರು.

ನಗರದ ಆನೆಗೊಂದಿ ರಸ್ತೆಯಲ್ಲಿನ ಸಾಯಿನಗರದಲ್ಲಿ ಬುಧವಾರ ನಡೆದ ಸಾಯಿನಗರದಿಂದ ಕಡೆಬಾಗಿಲುವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಅಂಜನಾದ್ರಿಗೆ ನಿತ್ಯ ಸಾವಿರಾರು ಭಕ್ತರು ಬೈಕ್, ಕಾರು, ಅಟೋ, ಟ್ರ್ಯಾಕ್ಟರ್‌, ಬಸ್‌ಗಳ ಮೂಲಕ ಭೇಟಿ ನೀಡಿ ದರ್ಶನ ಪಡೆಯುತ್ತಿದ್ದು, ಗಂಗಾವತಿ- ಹುಲಗಿ ರಸ್ತೆ ಮಾರ್ಗಕ್ಕೆ ವಾಹನಗಳ ಸಂಚಾರ ಅಧಿಕವಾಗಿದೆ. ಇದರಿಂದ ತಗ್ಗು-ಗುಂಡಿಗಳು ಹೆಚ್ಚಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ.

‘ಈ ಹದಗಟ್ಟೆ ಸಂಚಾರ ತಪ್ಪಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯ ₹20 ಕೋಟಿ ಅನುದಾನದಲ್ಲಿ ಸಾಯಿನಗರದಿಂದ ಕಡೆಬಾಗಿಲು ಶ್ರೀರಂಗದೇವರಾಯಲು ವೃತ್ತದವರೆಗೆ 5 ಕಿ.ಮಿ ರಸ್ತೆಯನ್ನು 50 ಅಡಿ ಅಗಲದಲ್ಲಿ ಅಭಿವೃದ್ಧಿಪಡಿಸಲು ಭೂಮಿಪೂಜೆ ಮಾಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು’ ಎಂದರು.

ADVERTISEMENT

ಹನುಮಮಾಲಾ ವಿಸರ್ಜನೆ ವೇಳೆ ಮಾಲಾಧಾರಿಗಳು ರಾತ್ರಿ ವೇಳೆಯಲ್ಲಿ ಸಂಗಾಪುರದಿಂದ ಅಂಜನಾದ್ರಿವರೆಗೆ ಕತ್ತಲಲ್ಲೆ ಸಂಚಾರ ಮಾಡಬೇಕಿದ್ದು,ಇವರ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ಅಂಜನಾದ್ರಿವರೆಗೆ ₹6 ಕೋಟಿ ವೆಚ್ಚದಲ್ಲಿ ರಸ್ತೆ ಬದಿಯಲ್ಲಿ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಕೆ ಮಾಡಲಾಗುತ್ತದೆ.

‘ಗಂಗಾವತಿ ನಗರವನ್ನು ಮೈಸೂರು ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಯೋಜನೆಯಿದ್ದು, ಸದ್ಯ ನಗರದ ಎಲ್ಲ ವಾರ್ಡುಗಳ ಅಭಿವೃದ್ಧಿಗಾಗಿ ನಗರೋತ್ಥಾನದ ₹40 ಕೋಟಿ ಅನುದಾನ ಬಳಕೆ ಮಾಡಲಾಗುತ್ತಿದೆ. ಇದರಲ್ಲಿ ನಗರ ಹೃದಯ ಭಾಗದ ರಸ್ತೆ ಅಗಲೀಕರಣ, ಡಾಂಬರಿಕರಣ, ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ನಗರಸಭೆ ಅಧ್ಯಕ್ಷ ಮೌಲಾಸಾಬ, ಉಪಾಧ್ಯಕ್ಷ ಪಾರ್ವತಮ್ಮ ದೊಡ್ಡಮನಿ, ಸಿಂಗನಾಳ ವಿರುಪಾಕ್ಷಪ್ಪ, ಸಿದ್ದರಾಮಯ್ಯ ಸ್ವಾಮಿ, ಚೆನ್ನಪ್ಪ ಮಳಗಿ, ಶ್ರೀಧರ ಕಲ್ಮನಿ, ಶಿವಕುಮಾರ ಮಾದಿಗ, ಸುರೇಶ ಮುಕ್ಕುಂದಿ, ಮನೋಹರಗೌಡ, ಷಣ್ಮುಖ ನಾಯಕ, ರಮೇಶ ಚೌಡ್ಕಿ ಸೇರಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.