ADVERTISEMENT

ಬಿಜಕಲ್‌ ಶಾಲೆ ಮುಖ್ಯಶಿಕ್ಷಕಿ ಅಮಾನತಿಗೆ ಗ್ರಾಮಸ್ಥರ ಆಕ್ರೋಶ: ಶಾಲೆಗೆ ಬೀಗ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 14:40 IST
Last Updated 27 ಆಗಸ್ಟ್ 2024, 14:40 IST
ಕುಷ್ಟಗಿ ತಾಲ್ಲೂಕು ಬಿಜಕಲ್‌ ಗ್ರಾಮದಲ್ಲಿ ಗ್ರಾಮಸ್ಥರು ಮಂಗಳವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು
ಕುಷ್ಟಗಿ ತಾಲ್ಲೂಕು ಬಿಜಕಲ್‌ ಗ್ರಾಮದಲ್ಲಿ ಗ್ರಾಮಸ್ಥರು ಮಂಗಳವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು   

ಕುಷ್ಟಗಿ: ಬಿಸಿಯೂಟ ಯೋಜನೆ ಅವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರಭಾರ ಮುಖ್ಯಶಿಕ್ಷಕಿಯ ವಿರುದ್ಧ ಶಿಕ್ಷಣ ಇಲಾಖೆ ಕೈಗೊಂಡ ಶಿಸ್ತುಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ತಾಲ್ಲೂಕಿನ ಬಿಜಕಲ್‌ ಗ್ರಾಮಸ್ಥರು ಮಂಗಳವಾರ ಅಲ್ಲಿಯ ಪ್ರಾಥಮಿಕ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಬಿಸಿಯೂಟ ಸೇವಿಸಿದ ಶಾಲೆಯ ಬಹಳಷ್ಟು ಮಕ್ಕಳು ವಾಂತಿಯಿಂದ ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಾರೆ ಎಂಬ ಕಾರಣ ನೀಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಮಂಜುಳಾ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಅಮಾನತು ಆದೇಶ ಹಿಂಪಡೆಯುವವರೆಗೂ ಪ್ರತಿಭಟನೆ ನಡೆಸುತ್ತೇವೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.

ಮಂಗಳವಾರ ಬೆಳಿಗ್ಗೆ ಶಾಲೆ ಆರಂಭಗೊಳ್ಳುತ್ತಿದ್ದಂತೆ ಅಲ್ಲಿಗೆ ಬಂದ ಗ್ರಾಮಸ್ಥರು ಶಿಕ್ಷಕರು ಹಾಗೂ ಮಕ್ಕಳನ್ನು ಹೊರಗೆ ಕಳಿಸಿ ಮುಖ್ಯದ್ವಾರಕ್ಕೆ ಬೀಗಹಾಕಿ ಧರಣಿ ನಡೆಸಿದರು. ಮತ್ತು ಮಕ್ಕಳನ್ನು ಮನೆಗೆ ಕರೆದೊಯ್ದರು. ಹಾಗಾಗಿ ಶಾಲೆಗೆ ಹೋದರೂ ಶಿಕ್ಷಕರಿಗೆ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಬಿಸಿಯೂಟ ನೀಡಲು ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿತ್ತಾದರೂ ಮಕ್ಕಳು ಶಾಲೆಗೆ ಬಾರದ ಕಾರಣ ಊಟದ ವ್ಯವಸ್ಥೆ ಕೈಬಿಡಲಾಯಿತು ಎಂದು ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ಶರಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ‘ಬಿಸಿಯೂಟ ತಯಾರಿಸಿರುವಲ್ಲಿ ಲೋಪ ಎಸಗಿರುವ ಕಾರಣಕ್ಕೆ ಈಗಾಗಲೇ ಅಡುಗೆದಾರರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಹೀಗಿರುವಾಗ ಮುಖ್ಯಶಿಕ್ಷಕಿ ಮಾಡಿದ ತಪ್ಪೇನು ಎಂಬುದು ಅರ್ಥವಾಗುತ್ತಿಲ್ಲ. ಕಳೆದ ಎರಡು ದಶಕದಿಂದಲೂ ಶಿಕ್ಷಕಿ ಮಂಜುಳಾ ಅವರು ಗ್ರಾಮದ ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಸ್ತುಸ್ಥಿತಿ ಅರಿಯದೇ ಉಪನಿರ್ದೇಶಕರು ಅಮಾನತುಗೊಳಿಸಿದ್ದಾರೆ. ಹಾಗಾಗಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು’ ಎಂದು ಪಟ್ಟುಹಿಡಿದು ಕುಳಿತಿದ್ದರು.

ಆದರೆ ಕೊಪ್ಪಳದಲ್ಲಿ ಕೆಪಿಎಸ್‌ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಆ ಕರ್ತವ್ಯದಲ್ಲಿದ್ದು ಬರಲು ಸಾಧ್ಯವಾಗಿಲ್ಲ ಎಂದು ಕೆ.ಶರಣಪ್ಪ ಹೇಳಿದರಾದರೂ ಬೀಗ ತೆಗೆಯಲು ಗ್ರಾಮಸ್ಥರು ಒಪ್ಪಲಿಲ್ಲ. ಎಷ್ಟೇ ದಿನವಾದರೂ ಸರಿ ಪ್ರಭಾರ ಮುಖ್ಯಶಿಕ್ಷಕಿ ಅಮಾನತು ಆದೇಶ ಹಿಂಪಡೆಯುವವರೆಗೂ ಶಾಲೆ ಬಂದ್‌ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದರು.

ಕೆಟ್ಟ ಹೆಸರು: ಪದೇ ಪದೇ ಅಮಾಯಕರನ್ನು ಅಮಾನತುಗೊಳಿಸುತ್ತಿರುವುದರಿಂದ ಶಿಕ್ಷಕರು, ಪಿಡಿಒಗಳು ಸೇರಿದಂತೆ ನಮ್ಮ ಗ್ರಾಮಕ್ಕೆ ಬರುವುದಕ್ಕೆ ನೌಕರರು ಹಿಂದೇಟು ಹಾಕುತ್ತಿದ್ದಾರೆ. ಹಿಂದೆ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದರೂ ಅದಕ್ಕೆ ಸಂಬಂಧವಿಲ್ಲದ್ದರೂ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಲಾಯಿತು. ಆದರೆ ಜೆಜೆಎಂ ಕಾಮಗಾರಿಗೆ ಕಾರಣರಾದವರ ಮೇಲೆ ಇನ್ನೂ ಕ್ರಮ ಜರುಗಿಸಲಿಲ್ಲ. ಬಿಸಿಯೂಟ ಯೋಜನೆಯಲ್ಲಿ ಅಡುಗೆದಾರರ ಕರ್ತವ್ಯಲೋಪವಾಗಿದ್ದರೂ ಮುಖ್ಯಶಿಕ್ಷಕಿಯ ಮೇಲೆ ಶಿಸ್ತುಕ್ರಮ ಜರುಗಿಸಿದ್ದಾರೆ. ಇದರಿಂದ ನಮ್ಮ ಊರಿಗೆ ಕೆಟ್ಟ ಹೆಸರು ಬಂದಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು.

ತಪ್ಪು ಮಾಡಿರುವ ಅಡುಗೆದಾರರನ್ನು ಇನ್ನೂ ಸೇವೆಯಿಂದ ತೆಗೆದುಹಾಕಿಲ್ಲ. ಆದರೆ ತಪ್ಪು ಮಾಡದಿದ್ದರೂ ಮುಖ್ಯಶಿಕ್ಷಕಿಯನ್ನು ಅಮಾನತುಗೊಳಿಸಿರುವುದು ಸರಿಯಲ್ಲ.
ಶರಣಪ್ಪ ವಡ್ಡರ ಗ್ರಾಮಸ್ಥ
ಡಿಡಿಪಿಐ – ಗ್ರಾಮಸ್ಥರ ವಾಗ್ವಾದ
ಈ ಮಧ್ಯೆ ಮುಖ್ಯಶಿಕ್ಷಕಿ ಅಮಾನತು ಆದೇಶ ರದ್ದುಪಡಿಸುವಂತೆ ಒತ್ತಾಯಿಸಲು ಮಂಗಳವಾರ ಕೊಪ್ಪಳದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಮನವಿ ಸಲ್ಲಿಸಿದರು. ಆದರೆ ಆದೇಶ ರದ್ದುಪಡಿಸಲು ಸಾಧ್ಯವಿಲ್ಲ ಎಂದೆ ಉಪನಿರ್ದೇಶಕ ಹೇಳಿದರು ಎಂದು ಗ್ರಾಮಸ್ಥ ಶರಣಪ್ಪ ವಡ್ಡರ ಮಾಹಿತಿ ನೀಡಿದರು. ಆದರೆ ಜನರು ಶಾಲೆಗೆ ಬೀಗ ಹಾಕುವುದಿಲ್ಲ ಮಕ್ಕಳು ಶಾಲೆಗೆ ಬರುವುದಿಲ್ಲ ನೀವು ಏನಾದರೂ ಮಾಡಿಕೊಳ್ಳಿ ಎಂದು ಹೇಳಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಉಪನಿರ್ದೇಶಕರೊಂದಿಗೆ ಗ್ರಾಮಸ್ಥರು ವಾಗ್ವಾದಕ್ಕಿಳಿದಿದ್ದರು. ಮಕ್ಕಳ ಆರೋಗ್ಯದಲ್ಲಿ ತೊಂದರೆಯಾದರೆ ಯಾರು ಜವಾಬ್ದಾರಿ? ಎಂದು ಉಪನಿರ್ದೇಶಕ ಬಿರಾದಾರ ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.