ADVERTISEMENT

ಮದ್ಯ ಮುಕ್ತ ಬಿನ್ನಾಳದಲ್ಲಿ ಹಬ್ಬದ ಸಂಭ್ರಮ

ಗಾಂಧಿ ಬಳಗದಿಂದ ನಾಳೆ ಪಾದಯಾತ್ರೆ, ಗ್ರಾಮಸ್ಥರಲ್ಲಿ ಹುಮ್ಮಸ್ಸು 

ಪ್ರಮೋದ ಕುಲಕರ್ಣಿ
Published 1 ಅಕ್ಟೋಬರ್ 2025, 8:23 IST
Last Updated 1 ಅಕ್ಟೋಬರ್ 2025, 8:23 IST
ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ನೋಟ
ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದ ನೋಟ   

ಬಿನ್ನಾಳ (ಕೊಪ್ಪಳ): ಮದ್ಯ ಸೇವನೆ, ಹಲವು ಮನೆಗಳಲ್ಲಿಯೇ ಮದ್ಯದ ಘಾಟು ಸೇರಿದಂತೆ ಸಾಕಷ್ಟು ಸಮಸ್ಯೆ ಹಾಗೂ ಸಂಕಷ್ಟಗಳನ್ನು ಎದುರಿಸಿದ್ದ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಈಗ ಹಬ್ಬದ ಸಂಭ್ರಮ ಮನೆ ಮಾಡಿದೆ.

ಗ್ರಾಮದಲ್ಲಿ ಮದ್ಯದ ಅಮಲು ಹೆಚ್ಚಾಗಿದ್ದರಿಂದ ತಿಳಿವಳಿಕೆಯುಳ್ಳ ಜನರಲ್ಲಿ ಆತಂಕ ಮನೆ ಮಾಡಿತ್ತು. ಇದಕ್ಕೆ ಅಂತ್ಯ ಹಾಡಬೇಕು ಎಂದು ಹಿಂದೆ ಅನೇಕ ಪ್ರಯತ್ನಗಳನ್ನು ಮಾಡಲಾಗಿತ್ತು. ಈಗ ಫಲ ನೀಡುತ್ತಿದೆ. ಈ ಗ್ರಾಮ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿದ್ದು ಜಯದೇವ ಜಗದ್ಗುರುಗಳು ಇದೇ ಗ್ರಾಮದಲ್ಲಿ ಜನಿಸಿದವರು.

ಆರಂಭದಲ್ಲಿ ‘ಚೆನ್ನವೀರದೇವ’ ಎನ್ನುವ ಹೆಸರು ಹೊಂದಿದ್ದ ಜಯದೇವ ಸ್ವಾಮೀಜಿ ಬಿನ್ನಾಳದ ಬಸವೇಶ್ವರ ದೇವಸ್ಥಾನದಿಂದ ಅಕ್ಷರಭ್ಯಾಸ ಪ್ರಾರಂಭಿಸಿದರು. ಅನೇಕ ವಿದ್ವತ್ತು ಗಳಿಸಿ ಅನ್ನ, ಜ್ಞಾನದಾಸೋಹಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 1934ರಲ್ಲಿ ಸ್ವಾಮೀಜಿ ಮಹಾತ್ಮ ಗಾಂಧೀಜಿ ಅವರನ್ನು ಭೇಟಿಯಾಗಿದ್ದರು. ಪ್ರಸ್ತುತ ಮೇಘಾಲಯದ ರಾಜ್ಯಪಾಲರಾಗಿರುವ ಸಿ.ಎಚ್. ವಿಜಯಶಂಕರ ಅವರ ಮೂಲ ಊರು ಕೂಡ ಇದೇ ಬಿನ್ನಾಳ ಗ್ರಾಮ.

ADVERTISEMENT

ದೊಡ್ಡ ಪರಂಪರೆ ಹೊಂದಿರುವ ಈ ಗ್ರಾಮದಲ್ಲಿರುವ ಬಸವೇಶ್ವರ ದೇವಸ್ಥಾನ ಗ್ರಾಮಸ್ಥರ ಎಲ್ಲ ಸಾಧನೆಗೂ ಕೇಂದ್ರಬಿಂದು. ಗ್ರಾಮದಲ್ಲಿ ಅವ್ಯಾಹತವಾಗಿದ್ದ ಮದ್ಯದ ಹಾವಳಿಗೆ ಅಂತ್ಯ ಹಾಡಲು ಗ್ರಾಮದ ಪ್ರಜ್ಞಾವಂತರು ಸೇರಿಕೊಂಡು ಸರಣಿ ಸಭೆಗಳನ್ನು ಮಾಡಿದರು. ಪ್ರತಿವರ್ಷ ಶ್ರಾವಣದ ಮೂರನೇ ಸೋಮವಾರ ನಡೆಯುವ ಬಸವೇಶ್ವರ ಜಾತ್ರೆಗೂ ಮೊದಲು ಈ ಸಲ ಗ್ರಾಮದ ಹಿರಿಕಿರಿಯರು ಸೇರಿಕೊಂಡು ಮದ್ಯ ಮುಕ್ತ ಗ್ರಾಮಕ್ಕೆ ಪಣತೊಟ್ಟರು. ಇದಕ್ಕೆ ಆರಂಭದಲ್ಲಿ ಎದುರಾದ ಅನೇಕ ಸವಾಲುಗಳನ್ನು ಗ್ರಾಮಸ್ಥರೇ ಮುಂದೆ ನಿಂತು ಪರಿಹರಿಸಿದ್ದರಿಂದ ಈಗ ಮಾದರಿಯ ಭಿನ್ನ ಗ್ರಾಮವಾಗಿ ಬಿನ್ನಾಳ ಸಂಭ್ರಮಿಸುತ್ತಿದೆ.

ಗ್ರಾಮದ ಕಳಕಪ್ಪ ಕಂಬಳಿ, ಬಸವಂತಪ್ಪ ಕುಟುಗನಹಳ್ಳಿ, ಬಸವರಾಜ ಬನ್ನಿಕೊಪ್ಪ, ಸಂಗಣ್ಣ ತಹಶೀಲ್ದಾರ್‌, ಮಹಮ್ಮದ್‌ ಸಾಬ್‌ ವಾಲೀಕಾರ, ಜಗದೀಶ ಚೆಟ್ಟಿ, ಶಿವಪುತ್ರಪ್ಪ ಕಂಬಳಿ ಹೀಗೆ ಅನೇಕರು ತೊಟ್ಟ ಮದ್ಯಮುಕ್ತ ಗ್ರಾಮದ ಪಣಕ್ಕೆ ಈಗ ಫಲ ಲಭಿಸುತ್ತಿದೆ. ಆದ್ದರಿಂದ ಕೊಪ್ಪಳದ ಗಾಂಧಿ ಬಳಗ ಈ ವರ್ಷ ಬಿನ್ನಾಳಕ್ಕೆ ಪಾದಯಾತ್ರೆ ನಡೆಸಲು ಮುಂದಾಗಿದೆ.

ಗ್ರಾಮದಲ್ಲಿ ಸಂಭ್ರಮ: ಅಂದಾಜು ಮೂರು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ನಡೆಯಲಿರುವ ಪಾದಯಾತ್ರೆ ಬಿನ್ನಾಳ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರ ಖುಷಿಗೆ ಕಾರಣವಾಗಿದೆ. ಪಾದಯಾತ್ರೆಯಲ್ಲಿ ಬರುವ ನೂರಾರು ಜನರನ್ನು ಅದ್ದೂರಿಯಾಗಿ ಸ್ವಾಗತಿಸಲು ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ಭಾಜಾ ಭಜಂತ್ರಿ, ಮೆರವಣಿಗೆ, ಉಪಾಹಾರ, ವೇದಿಕೆ ಕಾರ್ಯಕ್ರಮ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಬಳಗದ ಸದಸ್ಯರ ಜೊತೆಗೆ ಗ್ರಾಮಸ್ಥರು ಕೂಡ ಊರ ಸಮೀಪದಿಂದ ಪಾದಯಾತ್ರೆ ನಡೆಸಲು ಸಿದ್ಧರಾಗಿದ್ದಾರೆ. ಹೀಗಾಗಿ ಊರಿನಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ.ಮದ್ಯ ಮುಕ್ತ ಗ್ರಾಮದ ನಮ್ಮ ಹೋರಾಟಕ್ಕೆ ಗಾಂಧಿಬಳಗದ ಪಾದಯಾತ್ರೆ ದೊಡ್ಡ ಬೆಂಬಲ. ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಕಳಕಪ್ಪ ಕಂಬಳಿ ಬಿನ್ನಾಳದ ಮುಖಂಡ

ಕಳಕಪ್ಪ ಕಂಬಳಿ
ಮದ್ಯ ಮುಕ್ತ ಗ್ರಾಮದ ನಮ್ಮ ಹೋರಾಟಕ್ಕೆ ಗಾಂಧಿಬಳಗದ ಪಾದಯಾತ್ರೆ ದೊಡ್ಡ ಬೆಂಬಲ. ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ
ಕಳಕಪ್ಪ ಕಂಬಳಿ ಬಿನ್ನಾಳದ ಮುಖಂಡ
ಸಂತೋಷ ಮೆಣಸಿನಕಾಯಿ
ಮದ್ಯ ಮಾರಾಟಕ್ಕೆ ಗ್ರಾಮದಲ್ಲಿ ಕಡಿವಾಣ ಹಾಕಿರುವ ಗ್ರಾಮದ ಹಿರಿಯರ ನಿರ್ಧಾರ ಸ್ವಾಗತಾರ್ಹ. ಇದು ಗ್ರಾಮದ ಅಭಿವೃದ್ಧಿಗೂ ನಾಂದಿಯಾಗುತ್ತದೆ. ಊರಿಗೂ ಒಳ್ಳೆಯ ಹೆಸರು ಬರುತ್ತದೆ.
ಸಂತೋಷ ಮೆಣಸಿನಕಾಯಿ ಬಿನ್ನಾಳದ ಯುವಕ
ಬಸವರಾಜ ಶ್ರೀಶೈಲಪ್ಪ ಕರೆಣ್ಣವರ
ನಮ್ಮ ಗ್ರಾಮ ಎಲ್ಲರಿಗೂ ಮಾದರಿಯಾಗಬೇಕು ಎನ್ನುವ ಆಶಯ ನಮ್ಮದು. ಇದಕ್ಕಾಗಿ ನಡೆಯುತ್ತಿರುವ ಹೋರಾಟದಿಂದ ಹುಮ್ಮಸ್ಸು ಹೆಚ್ಚಿದೆ. 
ಬಸವರಾಜ ಶ್ರೀಶೈಲಪ್ಪ ಕರೆಣ್ಣವರ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.