ಕುಕನೂರು: ತಾಲ್ಲೂಕಿನ ಬಿನ್ನಾಳ ಗ್ರಾಮದಲ್ಲಿ ಮದ್ಯಪಾನ, ಇಸ್ಪೀಟ್, ಜೂಜಾಟ, ಮಟ್ಕಾ ಯಾವುದಕ್ಕೂ ಆಸ್ಪದವಿಲ್ಲ! ಮಾತು ಮೀರಿದರೆ ದಂಡದ ಜತೆ ಶಿಕ್ಷೆಯೂ ಖಚಿತ. ಈ ವಿಷಯಗಳಿಗಾಗಿಯೇ ಬಿನ್ನಾಳ ಗ್ರಾಮ ಸದ್ಯ ಎಲ್ಲರ ಗಮನಸೆಳೆಯುತ್ತಿದೆ.
ವಿವಿಧ ಅಕ್ರಮ ಚಟುವಟಿಕೆಗಳಿಗೆ ಈ ಗ್ರಾಮದಲ್ಲಿ ಸಾರ್ವಜನಿಕರು ಕಡಿವಾಣ ಹಾಕಿದ್ದಾರೆ. ಮುಖ್ಯವಾಗಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದಕ್ಕೆ ತಡೆ ಹಾಕಲಾಗಿದೆ. ಬೇರೆ ಗ್ರಾಮಗಳಿಂದ ಕುಡಿದು ಬಂದು ಚೀರಾಡಿದರೆ, ನೆಮ್ಮದಿಗೆ ಭಂಗ ತಂದರೆ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಹಾಗೂ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗುವುದು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತದೆ.
ಗ್ರಾಮದ ದೈವದ ಮಾತನ್ನು ಮೀರಿದರೆ ₹ 1 ಲಕ್ಷದವರೆಗೆ ದಂಡ ವಿಧಿಸಲಾಗುತ್ತದೆ. ಬದಲಾವಣೆಯ ಗಾಳಿ ಬೀಸಬೇಕೆಂಬುದು ಇವರೆಲ್ಲರ ಒತ್ತಾಸೆ. ದುರ್ವ್ಯಸನ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿನ್ನಾಳ ಎಲ್ಲರ ಗಮನಸೆಳೆಯುತ್ತಿದೆ. ಇಲ್ಲಿನ ಮಹಿಳೆಯರು ಬಹಳ ಸಂತಸದಲ್ಲಿದ್ದಾರೆ.
ಯಾಕೀ ನಿರ್ಧಾರ?: ಇತ್ತೀಚಿನ ವರ್ಷಗಳಲ್ಲಿ ಬಿನ್ನಾಳ ಗ್ರಾಮದಲ್ಲಿ ಮದ್ಯವ್ಯಸನಿಗಳ ಪ್ರಮಾಣ ಹೆಚ್ಚಾಗಿತ್ತು. ನಿತ್ಯ ಕುಡಿದು ಬಂದು ಮನೆಗಳಲ್ಲಿ ಗಲಾಟೆ ಮಾಡುತ್ತಿದ್ದರಿಂದ ಕುಟುಂಬಸ್ಥರು ಕಿರಿಕಿರಿ ಅನುಭವಿಸುವಂತಾಗಿತ್ತು. ಗ್ರಾಮದಲ್ಲಿ ಇಸ್ಪೀಟ್, ಮಟ್ಕಾ ಹಾವಳಿ ಮಿತಿಮೀರಿತ್ತು. ದುಶ್ಚಟಕ್ಕೆ ಬಲಿಯಾಗಿ ಬದುಕು ಬೀದಿ ಪಾಲು ಮಾಡಿಕೊಳ್ಳುವ ಬದಲು ಚಟಗಳಿಗೇ ತಡೆ ಹಾಕುವ ಮೂಲಕ ಗ್ರಾಮದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಬೇಕು ಎಂದು ಯುವಕರ ಪಡೆ ಸಜ್ಜಾಗಿದೆ.
ಬಸವೇಶ್ವರರ ಆಶೀರ್ವಾದ: ಗ್ರಾಮದ ದೈವ ಬಿನ್ನಾಳ ಬಸವೇಶ್ವರ ಆಶೀರ್ವಾದ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಮದ್ಯ ಹಾಗೂ ದುಶ್ಚಟ ಮುಕ್ತ ಗ್ರಾಮವನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಅಂತೆಯೇ, ಗ್ರಾಮದಲ್ಲಿ ಆಗಸ್ಟ್ 1ರಿಂದ ಮಹಾಂತ ಶಿವಯೋಗಿಗಳ ದಿನಾಚರಣೆಯ ದಿನದಿಂದ ಯಾವುದೇ ಅಕ್ರಮ ಚಟುವಟಿಕೆಗೆ ಆಸ್ಪದ ನೀಡುತ್ತಿಲ್ಲ.
ಬಿನ್ನಾಳ ಗ್ರಾಮದಲ್ಲಿ ಮದ್ಯಪಾನ ಮತ್ತು ಜೂಜಾಟಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಸಜ್ಜಾಗಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸುಶಿಕ್ಷಿತರಾಗಿ ನಾಡಿನ ಪ್ರಗತಿಗೆ ಮುಂದಾಗಬೇಕುಕಳಕಪ್ಪ ಕರಿಯಣ್ಣನವರ ಗ್ರಾಮದ ಮುಖಂಡ
ಈ ತೀರ್ಮಾನದಿಂದ ಅನೇಕ ಕುಟುಂಬಗಳಲ್ಲೀಗ ನೆಮ್ಮದಿ ನೆಲೆಸಲಿದೆ. ಜನ ಮಾದಕ ದ್ರವ್ಯ ವ್ಯಸನಗಳಿಗೆ ಮುಕ್ತಿ ಹಾಡಿದಾಗ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯಜಗದೀಶ್ ಛಟ್ಟಿ ಕಳಕಪ್ಪ ಕಂಬಳಿ ಗ್ರಾಮಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.