ADVERTISEMENT

ಪ್ರವೀಣ್ ಹತ್ಯೆ: ಕೊಪ್ಪಳದಲ್ಲಿಯೂ ಬಿಜೆಪಿ ವಿವಿಧ ಮೋರ್ಚಾ ಮುಖ್ಯಸ್ಥರ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2022, 15:54 IST
Last Updated 27 ಜುಲೈ 2022, 15:54 IST
ಪ್ರವೀಣ್ ನೆಟ್ಟಾರು
ಪ್ರವೀಣ್ ನೆಟ್ಟಾರು    

ಕೊಪ್ಪಳ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮೃದು ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಜಿಲ್ಲೆಯ ವಿವಿಧ ವಿಭಾಗಗಳ ಬಿಜೆಪಿ ಮುಖ್ಯಸ್ಥರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

‘ಹಿಂದೂ ಕಾರ್ಯಕರ್ತರ ವಿಷಯದಲ್ಲಿ ಸರ್ಕಾರ ಮೃದು ಧೋರಣೆಯಿಂದ ನಡೆದುಕೊಳ್ಳುತ್ತಿದೆ. ಈ ಕ್ರಮವನ್ನು ಖಂಡಿಸಿ ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ಬಿಜೆಪಿಯ ಜಿಲ್ಲಾ ಕಾರ್ಮಿಕ ಪ್ರಕೋಷ್ಠ ವಿಭಾಗದ ಸಂಚಾಲಕ ಶಿವಕುಮಾರ್‌ ಆದೋನಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಯಲಬುರ್ಗಾ ಯುವ ಮೋರ್ಚಾ ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ ’ಪಕ್ಷದ ಸಕ್ರಿಯ ಕಾರ್ಯಕರ್ತನ ಕೊಲೆ ದುರ್ದೈವದ ಸಂಗತಿ. ಹಿಂದೆ ನಡೆದ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿ ನ್ಯಾಯ ಸಿಕ್ಕಿಲ್ಲ. ಈ ಪ್ರಕರಣದಲ್ಲಿಯೂ ಅದೇ ಸ್ಥಿತಿ ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ನಾನು ಹಾಗೂ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ಕೊಟ್ಟಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

ಕಾರಟಗಿ ಬಿಜೆಪಿ ಮಂಡಳ ಮಹಿಳಾ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ‘ರಾಜ್ಯದಲ್ಲಿ ಪದೇ ಪದೇ ಹಿಂದೂ ಕಾರ್ಯಕರ್ತರ ನೆತ್ತರು ಹರಿಯುತ್ತಿದೆ. ನಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಕಠಿಣ ಕ್ರಮ ಎನ್ನುವುದು ಕೇವಲ ಭರವಸೆಯಾಗಿದೆ. ಹಿಂದೂ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲದ ಕಾರಣ ಈ ಸ್ಥಾನದಲ್ಲಿ ಮುಂದುವರಿಯುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿ ಇರುವೆ’ ಎಂದಿದ್ದಾರೆ. ಇವರೆಲ್ಲರೂ ಸಾಮಾಜಿಕ ತಾಣದಲ್ಲಿ ತಮ್ಮ ರಾಜೀನಾಮೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಎಚ್‌. ಪಾಟೀಲ ’ಹತ್ಯೆ ಘಟನೆಯಿಂದ ಪಕ್ಷದ ವಿವಿಧ ಮೋರ್ಚಾ ಮುಖಂಡರು ಆಕ್ರೋಶಗೊಂಡು ಸಾಮಾಜಿಕ ತಾಣದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಸರ್ಕಾರ ಘಟನೆ ಕುರಿತು ಆದಷ್ಟು ಬೇಗನೆ ಕ್ರಮ ಕೈಗೊಳ್ಳಲಿದೆ’ ಎಂದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.