
ಕೊಪ್ಪಳ: ಗಂಗಾವತಿಯಲ್ಲಿ ಕೆಲವು ದಿನಗಳ ಹಿಂದೆ ನಡೆದಿದ್ದ ಬಿಜೆಪಿ ಯುವ ಮೋರ್ಚಾನಗರ ಘಟಕದ ಅಧ್ಯಕ್ಷ ವೆಂಕಟೇಶ್ ಕುರುಬರ ಕೊಲೆಗೆ ದುಷ್ಕರ್ಮಿಗಳು ಬಳ್ಳಾರಿಯಲ್ಲಿ ಸಂಚು ರೂಪಿಸಿದ ಅಂಶ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಈ ಘಟನೆಯ ಪ್ರಮುಖ ಆರೋಪಿ ಗಂಗಾವತಿಯ ಲಿಂಗರಾಜ ಕ್ಯಾಂಪ್‌ನ ರವಿ ಹಾಗೂ ಗಂಗಾಧರ ಗೌಳಿ ಎಂಬುವವರನ್ನು ಪೊಲೀಸರು ಬಳ್ಳಾರಿಯಲ್ಲಿ ಬಂಧಿಸಿದ್ದಾರೆ. ತಾಂತ್ರಿಕವಾಗಿ ಹಾಗೂ ವಿವಿಧ ಮೂಲಗಳಿಂದ ಮಾಹಿತಿ ಪಡೆದು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ನಮ್ಮ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇದರಿಂದಾಗಿ ಬಂಧಿತ ಆರೋಪಿಗಳ ಸಂಖ್ಯೆ ಒಟ್ಟು 10ಕ್ಕೆ ಏರಿಕೆಯಾಗಿದೆ.
‘ತಲೆ ಮೆರೆಸಿಕೊಂಡಿದ್ದ ಇಬ್ಬರು ಪ್ರಮುಖರ ಪತ್ತೆಗಾಗಿ ಐದು ತಂಡಗಳನ್ನು ಮಾಡಲಾಗಿತ್ತು. ರವಿ ಹಾಗೂ ಗಂಗಾಧರ ಇಬ್ಬರೂ ಮೇಲೂ ಹಿಂದೆ ವಿವಿಧ ಪ್ರಕರಣಗಳು ದಾಖಲಾಗಿವೆ. ಹಣಕಾಸಿನ ವ್ಯವಹಾರದ ಕಾರಣಕ್ಕೆ ಕೊಲೆ ನಡೆದಿರುವ ಶಂಕೆಯಿದೆ. ವಿಚಾರಣೆ ಪ್ರಗತಿಯಲ್ಲಿದೆ’ ಎಂದು ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್, ಡಿವೈಎಸ್‌ಪಿ ಜಾಯಪ್ಪ ನ್ಯಾಮಗೌಡರ, ಗಂಗಾವತಿ ನಗರ ಠಾಣೆ ಪೊಲೀಸ್ ಇನ್‌ಸ್ಟೆಕ್ಟರ್ ಪ್ರಕಾಶಮಾಳಿ, ಸೆನ್ ಠಾಣೆಯ ಆಂಜನೇಯ ಸೇರಿದಂತೆ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.