
ಕೊಪ್ಪಳ: ರಾಜ್ಯ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆ ಅನುಷ್ಠಾನಕ್ಕೆ ಮುಂದಾಗಿದ್ದು, ಇದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಆದ್ದರಿಂದ ಸರ್ಕಾರ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ನಗರದ ಅಶೋಕ ವೃತ್ತದಲ್ಲಿ ಬುಧವಾರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಈ ಮಸೂದೆಯಿಂದಾಗಿ ನಾಗರಿಕರ ಮೂಲ ಹಕ್ಕುಗಳನ್ನು ಕಸಿದುಕೊಂಡಂತೆ ಆಗುತ್ತದೆ. ಸಂವಿಧಾನದ 19 (1) ಹಾಗೂ (2) ಪರಿಚ್ಛೇದದ ಅಡಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಬಿಜೆಪಿ ಮುಖಂಡರು ಹರಿಹಾಯ್ದರು.
ಮಸೂದೆ ಜಾರಿಗೆ ತರುವ ಮೂಲಕ ಸರ್ಕಾರದ ವಿರುದ್ಧ ಬಾಯಿ ಮುಚ್ಚಿಸುವ ಹುನ್ನಾರ ಮಾಡಲಾಗುತ್ತಿದೆ. ದ್ವೇಷ ಭಾಷಣದ ಕುರಿತು ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದ್ದು, ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಚರ್ಚೆ, ವ್ಯಂಗ್ಯ ಮಾಡುವುದು ಮತ್ತು ಸತ್ಯವನ್ನು ಹೇಳುವುದು ಕೂಡ ದ್ವೇಷವೆಂದು ಪರಿಗಣಿಸುವ ಅಪಾಯವಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಉಂಟು ಮಾಡುವ ಆತಂಕ ಎದುರಾಗಿದೆ ಎಂದು ಹೇಳಿದರು. ಆದ್ದರಿಂದ ಸರ್ಕಾರ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಮುಖಂಡರಾದ ಸುನಿಲ್ ಹೆಸರೂರು, ಉಮೇಶ ಕೊರ್ಡೆಕರ್, ಮಲ್ಲಪ್ಪ, ನೀಲಕಂಠಯ್ಯ, ಪ್ರದೀಪ ಹಿಟ್ನಾಳ, ಮಲ್ಲಿಕಾರ್ಜುನ ಕಟ್ಟಿ, ಜಯಶ್ರೀ ಗೊಂಡಬಾಳ, ಗೀತಾ ಮುತ್ತಾಳ ಹಾಗೂ ಕೀರ್ತಿ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.