ಕೊಪ್ಪಳ: ‘ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ರಾಜ್ಯದ ಬಿಜೆಪಿ ನಾಯಕರಿಗೂ ಗೊತ್ತಿದೆ. ಆದರೆ ಅವರು ತಮ್ಮ ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ರಾಜ್ಯದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ವಿರೋಧ ಪಕ್ಷದವರು ಇರುವುದೇ ನಮ್ಮ ವಿರೋಧವಾಗಿ ನಡೆದುಕೊಳ್ಳಲು. ಅವರು ಹೈಕಮಾಂಡ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಬಿಜೆಪಿ ಹಲವು ಶಾಸಕರು ವೈಯಕ್ತಿಕವಾಗಿ ನನ್ನೊಂದಿಗೆ ಮಾತನಾಡಿದ್ದು ಸಿದ್ದರಾಮಯ್ಯ ಅವರ ಯಾವ ತಪ್ಪಿಲ್ಲ. ಮೇಲಿನವರ ಒತ್ತಡಕ್ಕೆ ಮಣಿದು ಪ್ರತಿಭಟನೆ ಮಾಡುತ್ತಿದ್ದೇವೆ ಎಂದಿದ್ದಾರೆ’ ಎಂದರು.
‘ಪ್ಯಾಸಿಕ್ಯೂಷನ್ ವಿರುದ್ಧ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ಹೈಕೋರ್ಟ್ ನೀಡಿದ ತೀರ್ಪು ಗೌರವಿಸುವೆ. ದೇಶ ಕಂಡ ಉತ್ತಮ ನಾಯಕನ ಮೇಲೆ ಕೇಂದ್ರ ಸರ್ಕಾರ ಗಧಾ ಪ್ರಹಾರ ಮಾಡುತ್ತಿದೆ. ಇದಕ್ಕೆ ನಾವು ಕಾನೂನು ಮೂಲಕವೇ ಉತ್ತರ ಕೊಡುತ್ತೇವೆ’ ಎಂದರು.
‘ಸಿದ್ದರಾಮಯ್ಯನವರು ನಿಷ್ಕಳಂಕರಾಗಿದ್ದರೂ ಈಗ ಆರೋಪ ಬಂದಿರುವ ಕಾರಣ ರಾಜೀನಾಮೆ ಕೊಡಲಿ ಎಂದು ಅನೇಕರು ಹೇಳುತ್ತಿದ್ದರೂ ತಪ್ಪೇ ಮಾಡದಿದ್ದರೂ ಅವರು ಯಾಕೆ ರಾಜೀನಾಮೆ ನೀಡಬೇಕು’ ಎಂದು ಹಿಟ್ನಾಳ ಪ್ರಶ್ನಿಸಿದರು. ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.