
ಗಂಗಾವತಿ: ಪುಸ್ತಕ ಕೇವಲ ಅಕ್ಷರ, ಹಾಳೆಗಳ ಕಟ್ಟಲ್ಲ. ಅದು ಮನುಷ್ಯ ಜೀವನದ ಜಡತ್ವಕ್ಕೆ ಚೈತನ್ಯ ತುಂಬುವ ಸಂಜೀವಿನಿ. ಪುಸ್ತಕಗಳು ಜ್ಞಾನಕ್ಕೆ ಚೇತನ’ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಮಾನಸ ಹೇಳಿದರು.
ನಗರದ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ‘ನನ್ನ ನೆಚ್ಚಿನ ಪುಸ್ತಕ’ ಅಭಿಪ್ರಾಯ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಹಿಂದೆ ಪುಸ್ತಕ ಮುದ್ರಣ ಬಹಳ ಕಷ್ಟಕರವಾಗಿತ್ತು. ಹಾಗಾಗಿ ಹೆಚ್ಚಿನ ಸಂಖ್ಯೆಯ ಪುಸ್ತಕಗಳು ಲಭ್ಯವಿರಲಿಲ್ಲ. ಓದುಗರ ಸಂಖ್ಯೆ ತುಂಬ ಹೆಚ್ಚಿತ್ತು. ಸದ್ಯ ಮುದ್ರಣ ಸರಳವಾಗಿದ್ದು, ಪ್ರತಿದಿನ ನೂರಾರು ಪುಸ್ತಕಗಳು ಹೊರ ಬರುತ್ತಿವೆ. ಈಚೆಗೆ ಓದುಗರ ಸಂಖ್ಯೆ ಮಾತ್ರ ತುಂಬ ಕಡಿಮೆ ಆಗಿರುವುದು ವಿಪರ್ಯಾಸದ ಸಂಗತಿ’ ಎಂದರು.
‘ಮಕ್ಕಳಿಗೆ, ಯುವಕರಿಗೆ, ಸಾರ್ವಜನಿಕರಿಗೆ ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಪುಸ್ತಕ ಪ್ರಾಧಿಕಾರ ಮನೆ, ಮನೆಗೆ ಗ್ರಂಥಾಲಯ, ಶಾಲಾ-ಕಾಲೇಜುಗಳಲ್ಲಿ ‘ನನ್ನ ಮೆಚ್ಚಿನ ಪುಸ್ತಕ’ ಎಂಬ ಯೋಜನೆ ಹಮ್ಮಿಕೊಂಡಿದೆ’ ಎಂದರು.
ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೊಟ್ಟೂರು ಸ್ವಾಮೀಜಿ ಮಾತನಾಡಿ, ‘ಪುಸ್ತಕಗಳು ಹಿಡಿಯಬೇಕಿದ್ದ ವಿದ್ಯಾರ್ಥಿಗಳು, ಕೈಯಲ್ಲಿ ಮೊಬೈಲ್ ಹಿಡಿದು ಸಮಯ ಹಾಳು ಮಾಡುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ’ ಎಂದರು.
ವಿದ್ಯಾರ್ಥಿನಿಯರು ತಮ್ಮ ತಮ್ಮ ಮೆಚ್ಚಿನ ಪುಸ್ತಕಗಳ ಕುರಿತು ಅಭಿಪ್ರಾಯಗಳು ಮಂಡಿಸಿದರು. ಉತ್ತಮ ಅಭಿಪ್ರಾಯಗಳಿಗೆ ಪ್ರಮಾಣಪತ್ರ ಸಹಿತ ಗ್ರಂಥ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ, ಸಂಸ್ಥೆಯ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಸಾಹಿತಿ ಪ್ರೊ. ಜಗದೇವಿ ಕಲಶೆಟ್ಟಿ, ಸಂಸ್ಥೆ ಕಾರ್ಯದರ್ಶಿ ಶರಣೆಗೌಡ.ಜಿ ಮಾಲಿ ಪಾಟೀಲ, ರಾಚಯ್ಯಸ್ವಾಮಿ ಹುಚ್ಚೇಶ್ವರಮಠ, ಉಪ ಪ್ರಾಚಾರ್ಯ ಕೆ.ಎಂ.ಬಸವರಾಜ, ಕನ್ನಡ ವಿಭಾಗದ ಮುಖ್ಯಸ್ಥ ವಾಣಿಶ್ರೀ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.