ಕೊಪ್ಪಳ: ‘ಲೇಖಕ ತನ್ನ ಅನುಭವವನ್ನು ಸಮಸ್ತತೆಯ ಅನುಭಾವವನ್ನಾಗಿ ಮಾಡಿದರೆ ಅದು ಕೃತಿಯ ಮೌಲ್ಯ’ ಎಂದು ಕೇಂದ್ರ ಜಿ.ಎಸ್.ಟಿ ಆಯುಕ್ತ ಕೊಟ್ರಸ್ವಾಮಿ ಎಂ ಹೇಳಿದರು.
ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ಭಾನುವಾರ ಅನ್ನದಾನೇಶ್ವರ ಶಿಕ್ಷಣ ಸೇವಾ ಟ್ರಸ್ಟ್‌ನ ಜಿಲ್ಲಾ ಪ್ರಕಾಶನದಿಂದ ಹೊರತಂದ ‘ಮರಳಿ ಮನ ಸಾಗಿದೆ’ ಕೃತಿ ಲೋಕಾರ್ಪಣೆ ಮಾತನಾಡಿದ ಅವರು ‘ಎಲ್ಲರೂ ಡಿವಿಜಿ ಅವರ ಮಂಕುತಿಮ್ಮನ ಕಗ್ಗವನ್ನು ಕನ್ನಡದ ಭಗವದ್ಗೀತೆ ಎಂದು ಕರೆಯುತ್ತಿದ್ದರು. ಜೀವನದ ಆಳ-ಅಗಲ, ಅರಿವುಗಳನ್ನು ನೀಡುವ ಕೃತಿ ಎನ್ನುವ ಕಾರಣಕ್ಕೆ ಆ ಪುಸ್ತಕ ಇಂದಿಗೂ ಮಹತ್ವ ಪಡೆದಿದೆ’ ಎಂದರು.
‘ಕುವೆಂಪು ಅವರ ಕೈಗೆ ಈ ಪುಸ್ತಕ ಬಂದಾಗ ಅದನ್ನು ಓದಿ ಮಂಕುತಿಮ್ಮನ ಕಗ್ಗದ ಶೈಲಿಯಲ್ಲಿಯೇ ಅವರು ಕೂಡ ʻಹಸ್ತಕ್ಕೆ ಬರೆ ನಕ್ಕೆ, ಓದುತ್ತ ಓದುತ್ತ ಮಸ್ತಕಕ್ಕಿಟ್ಟು ಗಂಭೀರನಾದೆ, ವಿಸ್ತರದ ದರ್ಶನಕ್ಕೆ ತುತ್ತತುದಿಯಲ್ಲಿ ನಿನ್ನ ಪುಸ್ತಕಕ್ಕೆ ಕೈಮುಗಿದೆ ಮಂಕುತಿಮ್ಮʼ ಎಂದು ಲೇಖನವೊಂದರಲ್ಲಿ ಬರೆದಿದ್ದಾರೆ ಎಂಬುದು ಆಕೃತಿಯ ಶ್ರೇಷ್ಠತೆಯನ್ನು ಬಿಂಬಿಸುವಂತಿದೆ’ ಎಂದು ಹೇಳಿದರು.
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಪಿ.ಎಸ್. ಅಮರದೀಪ್ ಅವರ ಪ್ರಥಮ ಕೃತಿ ಇದಾಗಿದೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಕಿನ್ನಾಳ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರಾಜಶೇಖರ್ ಪಾಟೀಲ್ ‘ಸಾಹಿತ್ಯ ಅಥವಾ ಒಂದು ಕೃತಿ ಬೆಳಗಬೇಕಾದರೆ ಕೃತಿ, ಕೃತಿಕಾರ, ಓದುಗರ ಬಳಗ ಅತ್ಯವಶ್ಯಕವಾಗಿ ಬೇಕು. ಇಲ್ಲಿ ಕೃತಿ ಮತ್ತು ಕೃತಿಕಾರನನ್ನು ಜೀವಂತವಾಗಿಡುವುದು ಓದುಗರಿಂದ ಮಾತ್ರ ಸಾಧ್ಯವಾಗುತ್ತದೆ. ಓದುಗರ ಮನದಾಳದಲ್ಲಿ ಉಳಿಯುವುದು ನಿಜವಾದ ಕೃತಿಯ ಲಕ್ಷಣ’ ಎಂದು ಅಭಿಮತ ವ್ಯಕ್ತಪಡಿಸಿದರು.
ಪಂಜು ಅಂತರ್ಜಾಲ ಪತ್ರಿಕೆಯ ನಟರಾಜು ಎಸ್.ಎಂ ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಬಂಧಕಾರ ಈರಪ್ಪ ಕಂಬಳಿ ಕೃತಿ ಪರಿಚಯಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ನಾಗರಾಜ ಜುಮ್ಮನ್ನವರ, ಲೇಖಕ ಪಿ.ಎಸ್. ಅಮರದೀಪ್, ಜಾನಪದ ಕಲಾವಿದ ಮೆಹಬೂಬ್ ಕಿಲ್ಲೇದಾರ, ಸಾಹಿತಿ ಮಹೇಶ್ ಬಳ್ಳಾರಿ, ಪತ್ರಕರ್ತ ಶ್ರೀಕಾಂತ್ ಅಕ್ಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕಡ್ಲಿ ಸುವರ್ಣ ಶಿವರಾಜ, ಕಡ್ಲಿ ಹೇಮಲತಾ ಗುರುಬಸವರಾಜ ಅವರನ್ನು ಸನ್ಮಾನಿಸಲಾಯಿತು.
ಅಮರದೀಪ್ ಅವರ ಮೊದಲ ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಮುನ್ನ ಎಸ್.ಎಲ್.ಭೈರಪ್ಪ ಅವರಿಗೆ ಶ್ರದ್ದಾಂಜಲಿ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಈಶ್ವರ ಹತ್ತಿ
ಈ ಪುಸ್ತಕದಲ್ಲಿ ಕಲ್ಪನೆಯಿಲ್ಲ. ಕಲ್ಪನೆ ಹೆಚ್ಚಾದಾಗ ವಾಸ್ತವತೆ ಕಡಿಮೆಯಾಗುತ್ತದೆ. ಲೇಖಕರು ತಮ್ಮ ಬದುಕಿನ ಅನುಭವಗಳನ್ನು ಬರಹದ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಮಧ್ಯಮ ವರ್ಗದ ವ್ಯಕ್ತಿಯ ತೋಳಲಾಟಗಳು ಈ ಪುಸ್ತಕದಲ್ಲಿ ಅಡಕವಾಗಿವೆ.ಈಶ್ವರ ಹತ್ತಿ ಸಾಹಿತಿ
ಬರಹ ಓದುಗನನ್ನು ಒಳಗೊಂಡಾಗ ಯಶಸ್ವಿ ಲೇಖನವಾಗುತ್ತದೆ. ಅಂಥ ಬರಹಗಳು ಗುಚ್ಛ ಮರಳಿ ಮನ ಸಾಗಿದೆ ಪುಸ್ತಕದಲ್ಲಿವೆ. ಈ ಕೃತಿ ಮೂಲಕ ಅಮರದೀಪ ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದಾರೆ.ಮಂಜುನಾಥ ಡೊಳ್ಳಿನ ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.