ADVERTISEMENT

‘ಬೇಸಾಯ: ನಡುಗಡ್ಡೆಗೆ ಸೇತುವೆ ನಿರ್ಮಿಸಿ’

ಶಿವಪುರದ ನಡುಗಡ್ಡೆಯಲ್ಲಿ 185 ಎಕರೆ ಕೃಷಿ ಕಾಯಕ; ಸೇತುವೆ ನಿರ್ಮಿಸುವ ಬೇಡಿಕೆ ನೆನೆಗುದಿಗೆ

ಪ್ರಮೋದ
Published 11 ಆಗಸ್ಟ್ 2022, 5:43 IST
Last Updated 11 ಆಗಸ್ಟ್ 2022, 5:43 IST
ಹುಲಗಿ ಸಮೀಪದ ಶಿವಪುರದಲ್ಲಿ ನಡುಗಡ್ಡೆಯಲ್ಲಿ ನಡೆದ ಕಾರ್ಯಾಚರಣೆಯ ಚಿತ್ರಣ
ಹುಲಗಿ ಸಮೀಪದ ಶಿವಪುರದಲ್ಲಿ ನಡುಗಡ್ಡೆಯಲ್ಲಿ ನಡೆದ ಕಾರ್ಯಾಚರಣೆಯ ಚಿತ್ರಣ   

ಶಿವಪುರ (ಕೊಪ್ಪಳ): ಧಾರ್ಮಿಕ ಕ್ಷೇತ್ರ ಹುಲಿಗಿ ಸಮೀಪದ ಶಿವಪುರದ ನಡುಗಡ್ಡೆಯಲ್ಲಿ ಹಲವಾರು ಕುಟುಂಬಗಳು ಭೂಮಿ ಹೊಂದಿವೆ. ಹೀಗಾಗಿ ತುಂಗಭದ್ರಾ ನದಿಯಿಂದ ಹೆಚ್ಚು ನೀರು ಬಿಟ್ಟ ಪ್ರತಿ ಬಾರಿಯೂ ಈ ಕುಟುಂಬಗಳಿಗೆ ಸಮಸ್ಯೆ ತಪ್ಪಿದ್ದಲ್ಲ.

ಶಿವಪುರ ಗ್ರಾಮದ ಸುತ್ತಮುತ್ತಲಿರುವ ಮಹಮ್ಮದ್ ನಗರ, ಕವಳಿ, ಹುಲಿಗಿ, ಹೊಸ ಬಂಡಿ ಹರ್ಲಾಪುರ ಮತ್ತು ಹೊಸ ಬಂಡಿ ಹರ್ಲಾಪುರ ಗ್ರಾಮಗಳ ರೈತರು ಬೇಸಾಯಕ್ಕೆ ನಡುಗಡ್ಡೆಗೆ ಹೋಗುತ್ತಾರೆ. ಅಲ್ಲಿ 185 ಎಕರೆ ಭೂಮಿ ಇದ್ದು, ಮುಖ್ಯವಾಗಿ ಭತ್ತ ಮತ್ತು ಮಲ್ಲಿಗೆ ಹೂ ಬೆಳೆಯಲಾಗುತ್ತದೆ.

ರೈತರು ತೆಪ್ಪದ ಮೂಲಕ ನಿತ್ಯ ಶಿವಪುರದಿಂದ ನಡುಗಡ್ಡೆ ಪ್ರದೇಶಕ್ಕೆ ಬೆಳಿಗ್ಗೆ ಹೋಗಿ, ಸಂಜೆ ಮರಳುತ್ತಾರೆ. ಶಿವಪುರದ ಮಾರ್ಕಂಡೇಶ್ವರ ದೇವಸ್ಥಾನದಿಂದ ನಡುಗಡ್ಡೆಗೆ ಸೇತುವೆ ನಿರ್ಮಿಸಬೇಕು ಮತ್ತು ನಗರಗಡ್ಡೆ ಬಳಿ ಈಗಿರುವ ಸೇತುವೆ ದೊಡ್ಡದು ಮಾಡಬೇಕು ಎಂಬುದು ರೈತರ ಬೇಡಿಕೆ.

ADVERTISEMENT

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಾಗ ಅನೇಕ ಸಲ ರೈತರು ನಡುಗಡ್ಡೆಯಲ್ಲಿಯೇ ಚಳಿ, ಮಳೆ ಲೆಕ್ಕಿಸದೇ ಅಲ್ಲಿಯೇ ಟೆಂಟ್‌ ನಿರ್ಮಿಸಿಕೊಂಡು ಬಿಡಾರ ಹೂಡುತ್ತಾರೆ. ಈಗ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿರುವ ಕಾರಣ ಜೀವ ಹಾನಿಯಾಗುವ ಅಪಾಯದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಕೊಪ್ಪಳ ತಾಲ್ಲೂಕು ಆಡಳಿತದ ಆಧಿಕಾರಿಗಳು ಮನವೊಲಿಸಿ ಕರೆದುಕೊಂಡು ಬಂದಿದ್ದಾರೆ.

‘ಅಧಿಕಾರಿಗಳು ನಮ್ಮನ್ನು ನಡುಗಡ್ಡೆಯಿಂದ ಕರೆ ತಂದಿದ್ದಾರೆ. ನಾವು ನಿತ್ಯ ಅಲ್ಲಿಗೆ ತೆರಳಿ ಉಳುಮೆ ಮಾಡಬೇಕು. ಇಲ್ಲದಿದ್ದರೆ ನಮ್ಮ ಮತ್ತು ಕುಟುಂಬದವರ ಹೊಟ್ಟೆ ತುಂಬುವುದಿಲ್ಲ. ಇದಕ್ಕೆ ಶಾಶ್ವತ ಪರಿಹಾರದ ರೂಪದಲ್ಲಿ ಕಾಲುಸಂಕ ಅಥವಾ ಸೇತುವೆ ನಿರ್ಮಿಸುವಂತೆ ಕೋರಿದರೂ ಜನಪ್ರತಿನಿಧಿಗಳು ಸ್ಪಂದಿಸಿಲ್ಲ’ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ಸಲವೂ ಬೆಳೆದ ಬೆಳೆಯನ್ನು ಹೊಲದಲ್ಲೇ ಬಿಟ್ಟು ಬಂದರೆ ನಾವು ಏನು ತಿನ್ನಬೇಕು. ಕನಿಷ್ಠ ಅಲ್ಲಿಗೆ ಹೋಗಿಬರಲು ಸೌಲಭ್ಯ ಕಲ್ಪಿಸಿಕೊಡುವಂತೆ ಗೋಗೆರೆದರೂ ಪ್ರಯೋಜನವಾಗಿಲ್ಲ. ನೀರಿನ ರಭಸದ ನಡುವೆ ತೆಪ್ಪದಲ್ಲಿ ಪ್ರಾಣಭಯದಲ್ಲೇ ಓಡಾಡುತ್ತೇವೆ’ ಎಂದು ರೈತ ಮಾರ್ಕಂಡೇಯ ತಿಳಿಸಿದರು.

ಮನವೊಲಿಸಿ ಕರೆತಂದ ತಹಶೀಲ್ದಾರ್‌

ಶಿವಪುರ (ಕೊಪ್ಪಳ): ಕಾರ್ಯಾಚರಣೆಯ ತಂಡ ನಡುಗಡ್ಡೆಗೆ ಹೋದಾಗ ರೈತರು ಎಂದಿನಂತೆ ತಮ್ಮ ಕೃಷಿ ಕಾಯಕದಲ್ಲಿ ತೊಡಗಿದರು. ಸುರಕ್ಷಿತ ಸ್ಥಳಕ್ಕೆ ಬರುವಂತೆ ಕೊಪ್ಪಳ ತಹಶೀಲ್ದಾರ್‌ ವಿಠ್ಠಲ್‌ ಚೌಗುಲಾ ಹೇಳಿದರೂ ಅವರು ಒಪ್ಪಲಿಲ್ಲ. ಕೆಲ ಸಮಯದ ಬಳಿಕ ಮನವೊಲಿಸಿ ಕರೆದುಕೊಂಡು ಬಂದರು.

ಹುಲಗಿಯ ಗಿಡ್ಡಪ್ಪ (38), ಕೆಂಚಪ್ಪ (32), ಶಂಕ್ರಪ್ಪ (43), ಪ್ರದೀಪ್ (16), ಮಾರುತಿ (20), ಭೀಮ (20). ಮಲ್ಲೇಶಪ್ಪ (70), ಬಸವರಾಜ (48) ಮತ್ತು ಮಾರ್ಕಂಡೇಯ (32) ನಡುಗಡ್ಡೆಯಲ್ಲಿ ಕೃಷಿ ಕೆಲಸಕ್ಕೆ ಹೋಗಿದ್ದರು.

ಜಿಲ್ಲಾ ಅಗ್ನಿಶಾಮಕ ದಳದ ಠಾಣಾಧಿಕಾರಿ ಜಿ. ಕೃಷ್ಣೋಜಿ, ಮುನಿರಾಬಾದ್ ಪಿಎಸ್‌ಐ ಸುಪ್ರೀತ್‌ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.