ಯಲಬುರ್ಗಾ: ತಾಲ್ಲೂಕಿನ ಬುಕನಟ್ಟಿ ಗ್ರಾಮಕ್ಕೆ ಸಮರ್ಪಕ ಬಸ್ ಸೌಲಭ್ಯ ಇಲ್ಲದೇ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಅಕ್ಕಪಕ್ಕದ ಗ್ರಾಮಗಳಿಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಚ್ಚಲಕುಂಟಾ ಮತ್ತು ತಿಪ್ಪನಾಳ ರಸ್ತೆ ಮಾರ್ಗದ ನಡುವೆ ಎರಡು ಕಿ.ಮೀ ಒಳಗಡೆ ಬರುವ ಬುಕನಟ್ಟಿ ಗ್ರಾಮಕ್ಕೆ ಸಮರ್ಪಕ ಬಸ್ ಸಂಚಾರ ಇಲ್ಲದಾಗಿದೆ.
ಯಲಬುರ್ಗಾ ಕನಕಗಿರಿ ಬಸ್ ಈ ಮಾರ್ಗವಾಗಿ ಸಂಚರಿಸುತ್ತಿದ್ದರೂ ಅಪರೂಪಕ್ಕೆ ಎಂಬಂತಿದೆ. ಬುಕನಟ್ಟಿಗೆ ನಿತ್ಯ ಬರುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಅಲ್ಲದೇ ಕೆಲ ತಿಂಗಳ ಹಿಂದೆ ರಸ್ತೆ ದುರಸ್ಥಿ ಪ್ರಯುಕ್ತ ಬಸ್ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈಗ ರಸ್ತೆ ಅಭಿವೃದ್ಧಿಗೊಂಡಿದ್ದರೂ ನಿರಂತರವಾಗಿ ಸಂಚರಿಸುತ್ತಿಲ್ಲ. ವಿದ್ಯಾರ್ಥಿಗಳ ಮತ್ತು ಗ್ರಾಮಸ್ಥರ ಅನುಕೂಲಕ್ಕಾಗಿ ಯಲಬುರ್ಗಾ, ಹಿರೇವಂಕಲಕುಂಟಾ ಮತ್ತು ಕುಷ್ಟಗಿ ಕಡೆಯಿಂದ ಗ್ರಾಮವನ್ನು ಸಂಪರ್ಕಿಸಿ ಸಂಚರಿಸುವ ಹೊಸ ಮಾರ್ಗವನ್ನು ಸೃಷ್ಟಿಸಿ ಬಸ್ ಆರಂಭಿಸುವ ಅಗತ್ಯವಿದೆ. ಗುನ್ನಾಳದಿಂದ ಬೆಳಿಗ್ಗೆ ಬುಕನಟ್ಟಿ ಗ್ರಾಮದ ಕಡೆಗೆ ಬಸ್ ಸಂಚಾರ ಪ್ರಾರಂಭಿಸಿದರೆ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ. ಹಾಗೆಯೇ ಶಾಲೆ ಬಿಡುವ ಹೊತ್ತಿಗೆ ಗುನ್ನಾಳ ಕಡೆಗೆ ಸಂಚರಿಸಿದರೆ ವಿವಿಧ ಗ್ರಾಮಗಳ ಮಕ್ಕಳು ಶಾಲೆ–ಕಾಲೇಜುಗಳಿಗೆ ಬಂದು ಹೋಗಲು ಅನುಕೂಲವಾಗುತ್ತದೆ ಎಂದು ಗುಂಡಪ್ಪ ಪೂಜಾರ ಅಭಿಪ್ರಾಯಪಟ್ಟಿದ್ದಾರೆ.
ಹಿರೇವಡ್ರಕಲ್ಲ- ಹಿರೇವಂಕಲಕುಂಟಾ- ಯಲಬುರ್ಗಾ ಸಂಪರ್ಕಿಸುವ ಬಸ್ ಬೆಳಿಗ್ಗೆ 6.30ರಿಂದ 7 ಗಂಟೆ ಹೊತ್ತಿಗೆ ಹಾದು ಹೋಗುವುದು, ಹಾಗೆಯೇ ಯಲಬುರ್ಗಾ ಗಂಗಾವತಿ ಬಸ್ ಬೆಳಿಗ್ಗೆ 9.30ಕ್ಕೆ ಗ್ರಾಮಕ್ಕೆ ಬರುವುದು, ಮಧ್ಯಾಹ್ನ 1.20ರ ಹೊತ್ತಿಗೆ ಮರಳಿ ಬರುವ ವ್ಯವಸ್ಥೆಯಾದರೆ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸರಿಯಾದ ಬಸ್ ಇಲ್ಲದೇ ಇರುವ ಕಾರಣ ನಿತ್ಯ ಎರಡು ಕಿ.ಮೀ. ನಡೆದು ತಿಪ್ಪನಾಳ- ಉಚ್ಚಲಕುಂಟಾ ರಸ್ತೆಗೆ ನಡೆದುಕೊಂಡು ಹೋಗಿಯೇ ಬಸ್‍ಗಾಗಿ ಕಾಯಬೇಕಾಗುತ್ತದೆ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಭೀಮಪ್ಪ ತಲ್ಲೂರು, ಹನುಮೇಶ ಇಂಗಳದಾಳ, ಯಮನೂರಪ್ಪ ಗುನ್ನಾಳ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.