ADVERTISEMENT

ಸಿ.ಡಿ. ಪ್ರಕರಣ ಉಪ ಚುನಾವಣೆಯ ಮೇಲೆ ಪರಿಣಾಮ ಬೀರಲ್ಲ: ಬಿ.ವೈ.ವಿಜಯೇಂದ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 5:16 IST
Last Updated 3 ಏಪ್ರಿಲ್ 2021, 5:16 IST

ಕುಷ್ಟಗಿ: ‘ರಮೇಶ ಜಾರಕಿಹೊಳಿ ಅವರಿಗೆ ಸೇರಿದ್ದು ಎನ್ನಲಾಗಿರುವ ಸಿ.ಡಿ ಪ್ರಕರಣವು ಉಪ ಚುನಾವಣೆಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ‘ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಮಸ್ಕಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಡಿ ರಾದ್ಧಾಂತವನ್ನು ರಾಜ್ಯ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜನ ಇದರ ಬಗ್ಗೆ ತಿಳಿಯದಷ್ಟು ದಡ್ಡರಲ್ಲ. ಭವಿಷ್ಯದಲ್ಲಿ ಸಿ.ಡಿ ಪ್ರಕರಣದ ಸತ್ಯ ಹೊರಬರಲಿದೆ. ಅದೇ ರೀತಿ ಮಸ್ಕಿ ಸೇರಿದಂತೆ ಉಳಿದ ವಿಧಾನಸಭೆ, ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದಲೇ ಗೆಲುವು ಸಾಧಿಸಲಿದ್ದು ಕಾಂಗ್ರೆಸ್‌ ಪಕ್ಷ ದೂಳೀಪಟವಾಗಲಿದೆ. ರಾಜ್ಯದಲ್ಲಿ ಹಿಂದೆ ನಡೆದ ಉಪಚುನಾವಣೆಗಳಲ್ಲೂ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದಿತ್ತು‘ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದ ಅಭಿವೃದ್ಧಿಯನ್ನು ರಾಜ್ಯ ಬಿಜೆಪಿ ಸರ್ಕಾರ ಕಡೆಗಣಿಸಿಲ್ಲ ಎಂದು ಸ್ಪಷ್ಟಪಡಿಸಿದ ವಿಜಯೇಂದ್ರ, ನೀರಾವರಿ, ಶಿಕ್ಷಣ, ಮೂಲಸೌಲಭ್ಯಗಳಿಗೆ ಮುಖ್ಯಮಂತ್ರಿ ಹೆಚ್ಚಿನ ಒತ್ತು ನೀಡುತ್ತ ಬಂದಿದ್ದಾರೆ. ಯಾವುದೇ ಕಾರಣಕ್ಕೂ ಈ ಭಾಗಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ. ಪ್ರಮುಖ ಸಮಸ್ಯೆಗಳಿಗೆ ಹಂತ ಹಂತವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಯತ್ನಿಸಲಿದೆ‘ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.