ಕೊಪ್ಪಳ: ‘ವಚನ ಸಾಹಿತ್ಯದಿಂದ ಮನುಷ್ಯನ ಮನೋಭಾವ ಬದಲಾವಣೆಯಾಗುತ್ತದೆ’ ಎಂದು ಡಂಬಳ-ಗದಗ ಯಡೆಯೂರು ತೋಂಟದಾರ್ಯ ಮಠ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಸೋಮವಾರ ಸಂಜೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ಬಸವಪರ ಸಂಘಟನೆಗಳ ಆಶ್ರಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಾರ್ವಜನಿಕ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಬಸವಾದಿ ಶರಣರು ವಚನಗಳ ಮೂಲಕ ಸಮಾಜದ ಬದಲಾವಣೆ, ಪರಿವರ್ತನೆ ತರಲು ಪ್ರಯತ್ನಿಸಿದರು. ವಚನಗಳ ಮೂಲಕ ಜನರಲ್ಲಿದ್ದ ಅಜ್ಞಾನ, ಅಂಧಶ್ರದ್ಧೆ, ಮೂಢನಂಬಿಕೆ ಹೊಗಲಾಡಿಸಿದರು. ಆಗ ವಚನಗಳೇ ಮಾಧ್ಯಮವಾಗಿತ್ತು. ಶರಣರು ವಚನಗಳನ್ನು ಸಾಹಿತಿಗಳಾಗಲು ಬರೆಯಲಿಲ್ಲ. ಬದಲಿಗೆ ವೈಚಾರಿಕತೆಯನ್ನು ವೈಜ್ಞಾನಿಕ ಮನೋಭಾವ ಮೂಡಿಸಲು ವಚನ ಬರೆದರು. ಹಾಗಾಗಿ ವಚನ ಓದಿದರೆ ಅರಿವಿನ ಜ್ಯೋತಿ ಬೆಳಗುತ್ತದೆ. ಮನುಷ್ಯತ್ವದಿಂದ ಶರಣತ್ವದ ಕಡೆಗೆ ಸಾಗುತ್ತೇವೆ’ ಎಂದರು.
ಕಲಬುರಗಿಯ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ ಉಪನ್ಯಾಸ ನೀಡಿ,‘ವಚನ ಎಂದರೆ ಪ್ರಮಾಣ. ಜಿಡ್ಡುಗಟ್ಟಿದ್ದಕ್ಕೆ ಪುನರುಜ್ಜೀವನ ಗೊಳಿಸುವುದು ಚಳವಳಿ. ವಚನಗಳನ್ನು ಪುನರುಜ್ಜೀವನಗೊಳಿಸುವುದೇ ವಚನ ಚಳವಳಿಯಾಗಿದೆ. ಆಧುನಿಕ, ತಂತ್ರಜ್ಞಾನ ಯುಗದಲ್ಲಿದ್ದು, ಮನುಷ್ಯನ ಬದುಕು ವಿಭಿನ್ನವಾಗಿದೆ. ಹಾಗಾಗಿ ವಚನ ಓದುವ ಅಭ್ಯಾಸ ಮಾಡಿಕೊಳ್ಳಬೇಕು’ ಎಂದರು.
ಭಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಹಂದಿಗುಂದದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಹುಲಸೂರಿನ ಗುರುಬಸವೇಶ್ವರ ಶಿವಾನಂದ ಸ್ವಾಮೀಜಿ, ಸಂಸ್ಥಾನ ಮಠ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ನವಲಗುಂದದ ಬಸವಲಿಂಗ ಸ್ವಾಮೀಜಿ, ಮನಗುಂಡಿ ವೀರತೀಶಾನಂದ ಸ್ವಾಮೀಜಿ ಸ್ವಾಮೀಜಿ, ಧಾರವಾಡದ ಮುಮ್ಮಿಗಟ್ಟಿಯ ಬಸವಾನಂದ ಸ್ವಾಮಿ, ಬೆಳಗಾವಿಯ ಶಿವಬಸವದೇವರು, ಬಸವಕಲ್ಯಾಣದ ಬಸವದೇವರು, ಬಸವಪ್ರಭು ಸ್ವಾಮೀಜಿ ಜಾಗಿರಜಾಡಲದಿನ್ನಿಯ ವೀರಭದ್ರ ಸ್ವಾಮೀಜಿ, ಬಸವ ಕಲ್ಯಾಣದ ಸುಗುಣತಾಯಿ, ವಿಜಯಪುರದ ಚಂದ್ರಕಲಾ ಸಾನ್ನಿಧ್ಯ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಹೇಮಲತಾ ನಾಯಕ, ಮಾಜಿ ಶಾಸಕರ ಪರಣ್ಣ ಮುನವಳ್ಳಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಇದ್ದರು.
ಇದಕ್ಕೂ ಮುನ್ನ ನಗರದ ಬಸವೇಶ್ವರ ವೃತ್ತದಿಂದ ಹೊಸಪೇಟೆ ರಸ್ತೆಯ ಮೂಲಕ ಮಧುಶ್ರೀ ಗಾರ್ಡನ್ ವರೆಗೆ ಬಸವ ಸಂಸ್ಕೃತಿ ಅಭಿಯಾನದ ಜಾಗೃತಿ ಜಾಥಾ ನಡೆಯಿತು. ತಾಲ್ಲೂಕಿನ ಕಿಡದಾಳದ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಲಿಂಗಾಯತ ಮಠಾಧೀಶರು ಸಂವಾದ ನಡೆಸಿದರು.
ಆದರ್ಶ ಜೀವನ ಸಾಗಿಸೋಣ
‘ಬಸವಣ್ಣನವರು 36 ವರ್ಷ ಕಲ್ಯಾಣದಲ್ಲಿದ್ದರು. ಬಿಜ್ಜಳನಿಂದ ಒಂದೂ ಯುದ್ಧವಾಗದಂತೆ ನೋಡಿಕೊಂಡರು. ಯುದ್ಧ ಮಾಡಿದ್ದರೆ ದುಡ್ಡು ಕೊಟ್ಟು ಕಾವ್ಯ ಮತ್ತು ಶಾಸನಗಳನ್ನು ಬರೆಸಿದ್ದರೆ ಇತಿಹಾಸಕಾರರು ಉಲ್ಲೇಖಿಸುತ್ತಿದ್ದರು. ಇದನ್ನು ಬಸವಾದಿ ಶರಣರು ಮಾಡಲಿಲ್ಲ. ನಮ್ಮದು ಕ್ರಿಶ್ಚಿಯನ್ ಮುಸ್ಲಿಂ ಧರ್ಮದಂತಿಲ್ಲ. ನಮ್ಮ ಧರ್ಮ ನಾವು ಪಾಲಿಸೋಣ. ಬೇರೆಯವರು ನಮ್ಮನ್ನು ಹುಡುಕಿಕೊಂಡು ಬರಬೇಕು. ನಮ್ಮ ಬದುಕು ನೋಡಿ ವಿದೇಶಿಯರು ಬದುಕಬೇಕು. ಆ ರೀತಿಯ ಆದರ್ಶ ಜೀವನ ಸಾಗಿಸೋಣ ಎಂದು ಮನಗುಂಡಿಯ ಬಸವಾನಂದ ಸ್ವಾಮೀಜಿ ಹೇಳಿದರು.
ಲಿಂಗಾಯತ ಧರ್ಮದ ಮಹತ್ವ ಕೃತಿ ಬಿಡುಗಡೆ
ಸಂಗಮೇಶ ಕಲ್ಗಾಳರವರ ರಚಿತ ‘ಲಿಂಗಾಯತ ಧರ್ಮದ ಮಹತ್ವ’ ಎನ್ನುವ ಕೃತಿಯನ್ನು ಬಿಡುಗಡೆ ಮಾಡಲಾಯಿತು. ವಚನ ನೃತ್ಯ ವಚನ ಗೀತೆ ಪ್ರಸ್ತುತ ಪಡಿಸಲಾಯಿತು. ಸಾಣೆಹಳ್ಳಿಯ ಶಿವಸಂಚಾರ ತಂಡದ ಕಲಾವಿದರಿಂದ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿತ 'ಜಂಗಮದೆಡೆಗೆ' ಎನ್ನುವ ನಾಟಕ ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.