
ಕುಕನೂರು: ತೀವ್ರ ಚಳಿಯಿಂದ ತಾಲ್ಲೂಕಿನ ತಳಕಲ್, ಇಟಗಿ, ನಿಂಗಾಪುರ, ಯೆರೇ ಹಂಚಿನಾಳ ಸೇರಿದಂತೆ ಇತರ ಗ್ರಾಮಗಳಲ್ಲಿನ ಹಿಂಗಾರಿನ ತೊಗರಿ, ಕಡಲೆ ಬೆಳೆಗೆ ನೆಟೆರೋಗ ಕಾಣಿಸಿಕೊಂಡಿದೆ. ಇದರಿಂದ ಇಳುವರಿ ಕುಂಠಿತದ ಆತಂಕ ಹೆಚ್ಚಾಗಿದೆ.
ತಳಕಲ್ ಗ್ರಾಮದ ರೈತ ತಿಮ್ಮಣ್ಣ ಚೌಡಿ ಅವರು 10 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಕಡಲೆಉತ್ತಮವಾಗಿ ಬೆಳೆದು ಕಾಯಿ ಬಿಡುವ ಹಂತದಲ್ಲಿದೆ. ನೆಟೆರೋಗದಿಂದ ಜಮೀನಿನಲ್ಲಿನ ಶೇ 50ರಷ್ಟು ಬೆಳೆ ಒಣಗುತ್ತಿದೆ. ಇದರಿಂದ ಏನು ಮಾಡಬೇಕು ಎಂದು ತಿಳಿಯದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
‘ಎಕರೆಗೆ ಬಿತ್ತನೆ, ಕಳೆ ನಾಶ, ಔಷಧಿ ಸಿಂಪಡಣೆ ಸೇರಿದಂತೆ ಇತರ ಖರ್ಚಿಗಾಗಿ ₹25 ಸಾವಿರ ವೆಚ್ಚವಾಗಿದೆ. ಈಗ ಪ್ರಕೃತಿ ವಿಕೋಪದಿಂದ ಬೆಳೆ ಒಣಗುತ್ತಿದೆ. ಮಾಡಿದ ಖರ್ಚಿನಷ್ಟೂ ಇಳುವರಿ ಬರುವುದೇ ಎಂಬ ಅನುಮಾನ’ ಎನ್ನುತ್ತಾರೆ ಕೃಷಿಕ ಸಂಗಮೇಶ.
ನೆಟೆ ಅಥವಾ ಸಿಡಿರೋಗ ಬಾಧಿತ ಕಡಲೆ ಒಣಗಿ ಹೋಗುತ್ತವೆ. ರೋಗ ಕಂಡ ಕೂಡಲೇ ಆ ಗಿಡವನ್ನು ಕಿತ್ತು ಹಾಕಬೇಕು. ಆ ಜಾಗದಲ್ಲಿ ಶೀಲಿಂಧ್ರನಾಶಕ ಕಾರ್ಬಂಡೈಜಿಮ್ ಅಥವಾ ಮ್ಯಾಂಕೋಜಿಬ್ ಅನ್ನು ಪ್ರತಿ ಲೀಟರ್ ನೀರಿಗೆ 1 ಗ್ರಾಂ ಬೆರೆಸಿ ಸಿಂಪಡಿಸಬೇಕು. ಕಾಯಿ ಬಿಟ್ಟಿರುವ ಕಡಲೆಗೆ ಶೇ2ರಷ್ಟು ಯೂರಿಯಾ ಅಥವಾ ನೀರಿನಲ್ಲಿ ಕರಗುವ ಗೊಬ್ಬರ ಸಿಂಪಡಿಸಿದರೆ ಅಧಿಕ ಇಳುವರಿ ಪಡೆಯಬಹುದು ಎಂದು ರೈತ ಸಂಪರ್ಕ ಕೇಂದ್ರದ ಬಸವರಾಜ ಸಲಹೆ ನೀಡಿದರು.
ರೈತರು ಎರಡು ವರ್ಷಗಳಿಂದ ಅನಾವೃಷ್ಟಿಯಿಂದ ಕಂಗಾಲಾಗಿದ್ದಾರೆ. ಸಕಾಲಕ್ಕೆ ಯಾವುದೇ ಬೆಳೆ ವಿಮೆ ಮಂಜೂರಾಗಿಲ್ಲ. ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡಬೇಕು. ಶೀಘ್ರವೇ ಬೆಳೆ ವಿಮೆ ಮಂಜೂರು ಮಾಡಬೇಕು ಎಂದು ಇಟಗಿ ಗ್ರಾಮದ ರೈತ ಮುಖಂಡ ಸಿದ್ದನಗೌಡ ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.