ADVERTISEMENT

ಚಿಕ್ಕಮ್ಯಾಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು: ಬಳಕೆ ಮುನ್ನ ಅವನತಿಯತ್ತ ಕಟ್ಟಡ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:51 IST
Last Updated 5 ಅಕ್ಟೋಬರ್ 2025, 2:51 IST
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಮುಂದೆ ಬೆಳೆದುನಿಂತ ಕಸ ಹಾಗೂ ಮುಳ್ಳಿನ ಗಿಡಗಳು
ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಮುಂದೆ ಬೆಳೆದುನಿಂತ ಕಸ ಹಾಗೂ ಮುಳ್ಳಿನ ಗಿಡಗಳು    

ಯಲಬುರ್ಗಾ: ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಪದವಿ ಪೂರ್ವ ಕಾಲೇಜು ಕಟ್ಟಡ ಬಳಕೆಯಾಗುವ ಮುನ್ನವೇ ಅವನತಿಯತ್ತ ಸಾಗಿದೆ. ನಿರ್ಮಾಣಗೊಂಡು ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಆದರೆ ತರಗತಿಗಳು ಮಾತ್ರ ಪಕ್ಕದ ಕಟ್ಟಡದಲ್ಲಿಯೇ ನಡೆಯುತ್ತಿವೆ. ಅಧಿಕಾರಿಗಳು ನಿರ್ಲಕ್ಷಿಸಿದ್ದರಿಂದ ಕೋಟಿ ಹಣ ಖರ್ಚು ಮಾಡಿ ನಿರ್ಮಿಸಿರುವ ಕಟ್ಟಡ ಬಳಕೆಯಾಗದೇ ಹಾಳಾಗುತ್ತಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ 2017-18ನೇ ಸಾಲಿನಲ್ಲಿ ಮಂಜೂರಾಗಿದ್ದ ₹140 ಕೋಟಿ ವೆಚ್ಚದ ಈ ಕಾಲೇಜು ಕಟ್ಟಡವನ್ನು ಕೆಆರ್‌ಐಡಿಎಲ್ ನಿರ್ಮಿಸಿದೆ. ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಶಿಕ್ಷಣ ಇಲಾಖೆಯವರು ಕಟ್ಟಡವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿಲ್ಲ. ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸದೇ ನಿರ್ಲಕ್ಷಿಸುತ್ತಿರುವ ನಿಗಮದವರ ಧೋರಣೆ ವಿರುದ್ಧ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟವರ ಬೇಜವಾಬ್ದಾರಿತನದಿಂದ ಕಟ್ಟಡ ಹಾಳಾಗುತ್ತಿದೆ. ಉದ್ಘಾಟನೆಗೊಳ್ಳದೇ ಮಕ್ಕಳು ಬೇರೆ ಕಟ್ಟಡದಲ್ಲಿಯೇ ಪಾಠ ಕಲಿಯುವ ಸ್ಥಿತಿ ನಿರ್ಮಾಣಗೊಂಡಿದೆ.

‘ಕಳೆದ 10ವರ್ಷಗಳ ಹಿಂದೆಯೇ ಗ್ರಾಮಕ್ಕೆ ಮಂಜೂರಾಗಿದ್ದ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಕಟ್ಟಡ ಲಭ್ಯವಿಲ್ಲದ ಕಾರಣ ಪಕ್ಕದ ವಿಜ್ಞಾನ ಪ್ರಯೋಗಾಲಯದಲ್ಲಿ ತರಗತಿಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಲಾವಿಭಾಗ ಮಾತ್ರ ಪ್ರಾರಂಭಗೊಂಡಿದ್ದು, ಪ್ರಭಾರ ಪ್ರಾಚಾರ್ಯರನ್ನು ಹೊರತು ಪಡಿಸಿದರೆ ಉಳಿದಂತೆ ಅತಿಥಿ ಉಪನ್ಯಾಸಕರೇ ಪಾಠ ಬೋಧನೆ ನಡೆಸುತ್ತಿದ್ದಾರೆ. ಈ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡವನ್ನು ಬಳಸಿಕೊಳ್ಳದೇ ಇರುವುದು ಇಲಾಖೆಯ ಮತ್ತು ಸಂಬಂಧಪಟ್ಟವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ’ ಎಂದು ಗ್ರಾಮದ ತಿಮ್ಮಣ್ಣ ಬೋರಣ್ಣವರ, ಹನುಮೇಶ ಹಾಗೂ ಇತರರು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನಿರ್ಮಾಣಗೊಂಡ ಕಟ್ಟಡದ ಮುಂದೆ ಮಳೆ ನೀರು ಸಂಗ್ರಹಗೊಳುತ್ತಿದ್ದು, ಸಾಕಷ್ಟು ಕಸ, ಮುಳ್ಳಿನಗಿಡಗಳು ಬೆಳೆದಿವೆ. ಕಾಲೇಜಿಗೆ ಹೋಗಲು ದಾರಿ ಇಲ್ಲದಂತಾಗಿದೆ. ಈಗಾಗಲೇ ಕಟ್ಟಡದ ಅನೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೊಠಡಿಯಲ್ಲಿ ಅಳವಡಿಸಿದ ಟೈಲ್ಸ್‌ಗಳು ಕಿತ್ತುಹೋಗಿವೆ. ಬಳಕೆಯ ಮುನ್ನವೇ ದುರವಸ್ಥೆಗೆ ಕಾರಣರಾದವರ ವಿರುದ್ಧ ಜಿಲ್ಲಾಮಟ್ಟದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಕೂಡಲೇ ಬಾಕಿ ಕೆಲಸವನ್ನು ಪೂರ್ಣಗೊಳಿಸಬೇಕು. ಅಗತ್ಯ ಸೌಲಭ್ಯ ಒದಗಿಸಿ ಮಕ್ಕಳ ಬಳಕೆಗೆ ಅನುಕೂಲ ಮಾಡಿಕೊಡಬೇಕು’ ಎಂದು ಮರೆಗೌಡ ಯಂಕನಗೌಡ್ರ ಆಗ್ರಹಿಸಿದ್ದಾರೆ.

ಯಲಬುರ್ಗಾ ತಾಲ್ಲೂಕು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟದ ಬಳಸುವ ಮುನ್ನವೇ ಅನೇಕ ಕಡೆ ಬಿರುಕು ಕಾಣಿಸಿಕೊಂಡಿದೆ
ಕಾಲೇಜು ಕಟ್ಟಡ ಅಪೂರ್ಣವಾಗಿದ್ದರಿಂದ ಹಸ್ತಾಂತರವಾಗಿಲ್ಲ. ಅಗತ್ಯ ಸೌಲಭ್ಯ ಕಲ್ಪಿಸಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
– ಶರಣಪ್ಪ ಬೇಲೇರಿ, ಪ್ರಭಾರ ಪ್ರಾಚಾರ್ಯ ಸಪಪೂ ಕಾಲೇಜು ಚಿಕ್ಕಮ್ಯಾಗೇರಿ
ಕಟ್ಟಡದ ಮುಂದೆ ದೊಡ್ಡ ತಗ್ಗುಗಳಿದ್ದು ಸಾಕಷ್ಟು ನೀರು ಸಂಗ್ರಹವಾಗುತ್ತದೆ. ಕಟ್ಟಡವನ್ನು ಅಭಿವೃದ್ಧಿಗೊಳಿಸಿಲ್ಲ. ಸಾಕಷ್ಟು ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಎದ್ದುಕಾಣುತ್ತಿದೆ.
– ಶರಣಕುಮಾರ ಅಮರಗಟ್ಟಿ, ಅಧ್ಯಕ್ಷ ಗ್ರಾಪಂ ಚಿಕ್ಕಮ್ಯಾಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.