ADVERTISEMENT

ಗಂಗಾವತಿ | ಬಾಲ್ಯವಿವಾಹ ನಿಷೇಧಕ್ಕೆ ಕೈಜೋಡಿಸಿ: ಮಹಾಂತಸ್ವಾಮಿ ಪೂಜಾರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 6:14 IST
Last Updated 14 ನವೆಂಬರ್ 2025, 6:14 IST
ಗಂಗಾವತಿಯಲ್ಲಿ ಬುಧವಾರ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿದರು   
ಗಂಗಾವತಿಯಲ್ಲಿ ಬುಧವಾರ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮಾತನಾಡಿದರು       

ಗಂಗಾವತಿ: ‘ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಬಾಲ್ಯವಿವಾಹ ನಿಷೇಧಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಹೇಳಿದರು.

ಬುಧವಾರ ಇಲ್ಲಿನ ಪಂಪಾನಗರದ ಕೊಟ್ಟೂರೇಶ್ವರ ಸಂಯುಕ್ತ ವಿಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತದ ವತಿಯಿಂದ ನಡೆದ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಪೋಕ್ಸೊ ಕಾಯ್ದೆ-2012 ಹಾಗೂ ದತ್ತು ಕಾರ್ಯಕ್ರಮದ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಬಾಲಕ–ಬಾಲಕಿಯರನ್ನು ವಿವಾಹ ಮಾಡುವುದರಿಂದ ಮಕ್ಕಳ ದೈಹಿಕ, ಮಾನಸಿಕ, ಶಾರೀರಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹುಟ್ಟುವ ಮಗುವು ಅಂಗವಿಕಲ, ಅಪೌಷ್ಠಿಕ ಅಥವಾ ಶಿಶು ಮರಣ ಸಾಧ್ಯತೆ ಅಧಿಕವಾಗಿರುತ್ತದೆ. ತಾಯಿ ಅಥವಾ ಮಗು ಇಬ್ಬರು ಮೃತಪಡುವ ಆತಂಕ ಇರುತ್ತದೆ’ ಎಂದರು.

ADVERTISEMENT

ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಯಶ್ರೀ ಮಾತನಾಡಿ ‘ಇಲಾಖೆಯಡಿ ಹದಿಹರೆಯದ ಕಿಶೋರಿಯರಿಗೆ ಲಭ್ಯವಿರುವ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕಾಶಿಮಠ, ಕೊಟ್ಟೂರೇಶ್ವರ ಕಾಲೇಜಿನ ಪ್ರಾಚಾರ್ಯ ರವಿ ಚೌಹಾಣ, ಕಲ್ಮಠ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವೆಂಕನಗೌಡ, ಗಂಗಾವತಿಯ ಪಿಬಿಇ ಅಂಡ್ ಆರ್.ಡಿ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಯಮನಮ್ಮ, ಕಾರ್ಯಕ್ರಮ ಸಂಯೋಜಕ ಶರಣಪ್ಪ ಸಿಂಗನಾಳ, ವಿಷಯ ನಿರ್ವಾಹಕಿ ಬಸವಣ್ಣೆಮ್ಮ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.