ADVERTISEMENT

ಸ್ಥಳದಲ್ಲೇ ಮಾಸಾಶನ ಮಂಜೂರು; ವಿಕಾಸ್ ಕಿಶೋರ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 5:50 IST
Last Updated 20 ಮಾರ್ಚ್ 2022, 5:50 IST
ಕೊಪ್ಪಳ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಕುಂದುಕೊರತೆಗಳಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಂಸದ ಸಂಗಣ್ಣ ಕರಡಿ ಉತ್ತರಿಸಿದರು. ಸಿಇಒ ಫೌಜೀಯಾ ತರುನ್ನುಮ್, ಉಪವಿಭಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಮುಂತಾದವರು ಇದ್ದರು
ಕೊಪ್ಪಳ ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಕುಂದುಕೊರತೆಗಳಿಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಂಸದ ಸಂಗಣ್ಣ ಕರಡಿ ಉತ್ತರಿಸಿದರು. ಸಿಇಒ ಫೌಜೀಯಾ ತರುನ್ನುಮ್, ಉಪವಿಭಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಮುಂತಾದವರು ಇದ್ದರು   

ಕೊಪ್ಪಳ: ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನಕ್ಕೆ ಅರ್ಹರಿರುವ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಮಾಸಾಶನ ಮಂಜೂರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ ಹಾಗೂ ಎಲ್ಲ ಇಲಾಖೆಗಳ ಸಹಯೋಗದಲ್ಲಿ ತಾಲ್ಲೂಕಿನ ಬಹದ್ದೂರಬಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೂವಿನಾಳ ಗ್ರಾಮದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ‘ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಡಿ ವಿವಿಧ ಇಲಾಖೆಗಳ ಮಳಿಗೆಗಳಲ್ಲಿ ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಲವಾರು ಯೋಜನೆಗಳು ಹಾಗೂ ಗ್ರಾಮಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ಆಯಾ ಇಲಾಖೆಗಳ ಮಳಿಗೆಗಳಲ್ಲಿ ಸ್ವೀಕೃತಿಯಾಗಿರುವ ಅರ್ಜಿಗಳಿಗೆ ಸ್ಪಂದಿಸುವುದರ ಜೊತೆಗೆ ಸಮಸ್ಯೆಗಳ ನಿವಾರಣೆಗೆ ಆಯಾ ಇಲಾಖೆಗಳ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ADVERTISEMENT

ಸರ್ಕಾರದ ಅನುದಾನದ ಅನುಗುಣವಾಗಿ ಹೂವಿನಾಳ ಗ್ರಾಮದ ಶಾಲೆ, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಇಂದು ಸಲ್ಲಿಕೆಯಾಗುವ ಅರ್ಜಿಯನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತ್ವರಿತವಾಗಿ ಪರಿಹಾರ ನೀಡುವುದರ ಜೊತೆಗೆ ವಿಲೇವಾರಿ ಮಾಡಬೇಕು. ಕೋವಿಡ್-19 ಕುರಿತು ಯಾವುದೇ ನಿರ್ಲಕ್ಷ್ಯ ಬೇಡ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೊರೊನಾ ಹರಡದಂತೆ ಮುಂಜಾಗೃತೆ ವಹಿಸಬೇಕು. ಇದಲ್ಲದೇ 12 ರಿಂದ 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕಿಸಿ ಎಂದು ಹೇಳಿದರು.

ಸಂಸದ ಕರಡಿ ಸಂಗಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ‘ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಒಂದು ಜನಪರ, ಮಹತ್ವ ಪೂರ್ಣ ಕಾರ್ಯಕ್ರಮವಾಗಿದೆ. ಪ್ರಸ್ತುತ ಹೊಸದಾಗಿ ಹಮ್ಮಿಕೊಂಡ ‘ಕಂದಾಯ ದಾಖಲೆಗಳು ರೈತರ ಮನೆ ಬಾಗಿಲಿಗೆ‘ ಎಂಬ ಕಾರ್ಯಕ್ರಮವೂ ಸಹ ಮಾದರಿಯಾಗಿದೆ ಎಂದರು.

ಇಂತಹ ಕಾರ್ಯಕ್ರಮಗಳಿಂದ ಸರ್ಕಾರದ ಸೌಲಭ್ಯಕ್ಕೆ ಸಾರ್ವಜನಿಕರ ನಿರಂತರ ಅಲೆದಾಟ ನಿಲ್ಲುವುದರ ಜೊತೆಗೆ ಸಕಾಲಕ್ಕೆ ಜನಸಾಮಾನ್ಯರಿಗೆ ಸೇವೆ ದೊರೆಯಲಿದೆ. ಅಲ್ಲದೇ ತರಕಾರಿ ಬೆಳೆ, ಕೃಷಿ ಹೊಂಡ, ಬೋರ್ವೆಲ್, ಕುಡಿಯುವ ನೀರು, ಹನಿ ನೀರಾವರಿ ವ್ಯವಸ್ಥೆ, ಈರುಳ್ಳಿ ಘಟಕಕ್ಕೆ ಸರ್ಕಾರವು ಸಹಾಯಧನ ನೀಡುತ್ತಿದೆ. ಇವುಗಳ ಸದಪಯೋಗ ಎಲ್ಲಾ ರೈತರು ಪಡೆದುಕೊಳ್ಳಬೇಕು. ಕುರಿ, ಮೊಲ, ಜೇನು ಸಾಕಾಣಿಕೆ ಹಾಗೂ ಮಿಶ್ರ ಬೇಸಾಯವನ್ನು ಮಾಡುವಂತೆ ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್, ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ತಹಶೀಲ್ದಾರ್ ಅಮರೇಶ್ ಬಿರಾದಾರ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ಗ್ರಾ.ಪಂ. ಅಧ್ಯಕ್ಷೆ ಪಾರ್ವತೆಮ್ಮ ಕುರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.