ಕೊಪ್ಪಳ: ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಲು ಮುಂದಾಗಿರುವುದು ಮತ್ತು ಈಗಾಗಲೇ ಕೆಲಸ ಮಾಡುತ್ತಿರುವ ಕಾರ್ಖಾನೆಗಳು ಹೊರಸೂಸುತ್ತಿರುವ ಕಪ್ಪು ದೂಳಿನ ವಿರುದ್ಧ ನಗರದ ಪ್ರಮುಖ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹೋರಾಟ ಆರಂಭಿಸಿದೆ.
ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ ಸೇರಿದಂತೆ ಅನೇಕ ಕಾರ್ಖಾನೆಗಳಿಂದ ಮಾಲಿನ್ಯವಾಗುತ್ತಿದೆ. ಆದ್ದರಿಂದ ಜಿಲ್ಲಾ ಬಚಾವೊ ಆಂದೋಲನ ಸಮಿತಿಯಿಂದ ಪ್ರಮುಖ ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ನಮ್ಮ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಸಂಘಟಕರು ತಿಳಿಸಿದರು.
ಗೋಡೆ ಬರಹಕ್ಕೆ ಅಗತ್ಯ ಇರುವ ಬಣ್ಣಗಳನ್ನು ಕೊಪ್ಪಳ ಹಾಃಗೂ ಭಾಗ್ಯನಗರದ ವಿವಿಧ ಬಣ್ಣದ ವ್ಯಾಪಾರಿಗಳಿಂದ ದೇಣಿಗೆ ರೂಪದಲ್ಲಿ ಪಡೆದು ಗೋಡೆ ಬರಹಗಳನ್ನು ಮಾಡಲು ಸಮಿತಿ ಮುಂದಾಗಿದೆ. ಅಭಿಯಾನದಲ್ಲಿ ಗೋಡೆ ಬರಹ ಬರೆಯಲು ಚಿತ್ರ ಕಲಾವಿದ ರಾಜು ತೇರದಾಳ್ ಮತ್ತು ಕೃಷ್ಣ ಚಿತ್ರಗಾರ ಸೇರಿದಂತೆ ಅನೇಕರು ಕೈ ಜೋಡಿಸಿದ್ದಾರೆ.
‘ಕಾರ್ಖಾನೆಗಳ ದೂಳಿನಿಂದಾಗಿ ಜಿಲ್ಲಾಕೇಂದ್ರದ ಜನರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರ ಬದುಕು ದುರ್ಬರವಾಗಿದೆ. ಆದ್ದರಿಂದ ಈಗ ಹೋರಾಟ ಅನಿವಾರ್ಯವೂ ಆಗಿದೆ. ಹಿಂದೆ ಈಗಾಗಲೇ ಅನೇಕ ಹೋರಾಟಗಳನ್ನು ಮಾಡಿದ್ದು, ಮುಂದೆಯೂ ಸೃಜನಾತ್ಮಕ ಹೋರಾಟಗಳನ್ನು ರೂಪಿಸಲಾಗುವುದು. ಬಣ್ಣದ ಸಹಾಯ ಮಾಡಲಿಚ್ಚಿಸುವವರು, ಗೋಡೆ ಬರಹ ಮಾಡಲು ಇಚ್ಛಿಸುವ ಕಲಾವಿದರು ಆಂದೋಲನದ ಸದಸ್ಯರನ್ನು ಸಂಪರ್ಕಿಸಬೇಕು’ ಎಂದು ಸಂಘಟಕರು ಕೋರಿದ್ದಾರೆ.
ಆಂದೋಲನ ಸಮಿತಿಯ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಪ್ರಮುಖರಾದ ಕೆ.ಬಿ. ಗೋನಾಳ, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಶೆಟ್ಟರ್, ಎಸ್.ಎ. ಗಫಾರ್, ಜ್ಯೋತಿ ಎಂ. ಗೊಂಡಬಾಳ, ಶರಣು ಗಡ್ಡಿ, ಮುದುಕಪ್ಪ ಹೊಸಮನಿ, ಚನ್ನಬಸಪ್ಪ ಅಪ್ಪಣ್ಣವರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.